Advertisement

ಎಂಎಲ್‌ಸಿ, ಸಚಿವ ಸ್ಥಾನ ಒಪ್ಪಿಕೊಳ್ಳಲ್ಲ: ಕಾಗೋಡು

06:15 AM Nov 12, 2018 | |

ಸಾಗರ: ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಪರಿಷತ್‌ ಸದಸ್ಯ ಸ್ಥಾನವನ್ನು ನಿರಾಕರಿಸಿದ್ದಾರೆ. 
ಕಾಗೋಡು ತಿಮ್ಮಪ್ಪ ಅವರನ್ನು ಎಂಎಲ್‌ಸಿಯಾಗಿ ನಾಮಕರಣ ಮಾಡಿ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಎರಡು ದಿನಗಳ ಹಿಂದೆ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದರು. ಆದರೆ, ಈ ಆಫ‌ರ್‌ನ್ನು ಕಾಗೋಡು ನಿರಾಕರಿಸಿದ್ದಾರೆ.

Advertisement

ಭಾನುವಾರ ಈ ಕುರಿತು ಮಾತನಾಡಿ, “ಈಗಾಗಲೇ ಒಂದು ಸಲ ವಿಧಾನ ಪರಿಷತ್‌ ಸದಸ್ಯನಾಗಿ ಬಹಳ ವ್ಯಥೆ ಪಟ್ಟಿದ್ದೇನೆ. ಹೀಗಾಗಿ ಮತ್ತೂಮ್ಮೆ ಅಂತಹ ಅವಕಾಶ ಬಂದರೆ ಒಪ್ಪಿಕೊಳ್ಳುವ ಮನಸ್ಥಿತಿ ನನಗಿಲ್ಲ. ನನ್ನ ನಂಬಿಕೆ, ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಈ ವಯಸ್ಸಿನಲ್ಲಿ ಪರಿತಪಿಸಲು ನನಗೆ ಇಷ್ಟವಿಲ್ಲ. ಯಾರು ಏನೇ ಹೇಳಿದರೂ ಮತ್ತೂಮ್ಮೆ ನಾನು ನೋವು ಅನುಭವಿಸಲು ಸಿದ್ಧನಿಲ್ಲ’ ಎಂದರು.

ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೆ. ಆಗ ಬಲವಂತವಾಗಿ ನನ್ನನ್ನು ಎಂಎಲ್‌ಸಿ ಮಾಡಿದ್ದರು. ಲೋಹಿಯಾ ವಾದದಲ್ಲಿ ಬಲವಾದ ನಂಬಿಕೆ ಇದ್ದ ಕಾರಣ ನಾನು ಎಂಎಲ್‌ಸಿ ಆಗುವುದಿಲ್ಲ ಎಂದು ನೇರವಾಗಿ ಗುಂಡೂರಾವ್‌ ಅವರಿಗೆ ತಿಳಿಸಿದ್ದೆ. ಆದರೆ, ಭದ್ರಾವತಿ, ಶಿವಮೊಗ್ಗದ ಕೆಲ ನಾಯಕರು, ಎಫ್‌.ಎಂ.ಖಾನ್‌ ಮುಂತಾದವರು ಸೇರಿ ಒತ್ತಾಯ ಮಾಡಿ ನಾನು ಎಂಎಲ್‌ಸಿ ಆಗುವಂತೆ ಮಾಡಿದ್ದರು. ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಸ್ಥಾನ ಸಹ ನೀಡಿದ್ದರೆಂದು ನೆನಪಿಸಿಕೊಂಡರು.

ಆ ಸಂದರ್ಭ ಅಧಿವೇಶನದಲ್ಲಿ ವಿರೋಧ ಪಕ್ಷದ ಎ.ಕೆ.ಸುಬ್ಬಯ್ಯ ಅವರು “ಹಿಂದಿನ ಬಾಗಿಲಿನಿಂದ ಬಂದವರು’ ಎನ್ನುವ ಮೂಲಕ ನನ್ನನ್ನು ಆಡಿಕೊಂಡರು. ಆಗ ಬಹಳ ಬೇಸರವಾಗಿ ಕಣ್ಣೀರು ಹಾಕಿದ್ದೆ. ಮರಕ ಗೋವಿಂದ ರೆಡ್ಡಿ ಎಂಬುವರು ಎಂಎಲ್‌ಸಿ ಆದ ಕಾರಣಕ್ಕಾಗಿ ಲೋಹಿಯಾ ರೆಡ್ಡಿ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ನಂತರ ರೆಡ್ಡಿಯವರು ಕಾಂಗ್ರೆಸ್‌ ಸೇರಿಕೊಂಡರು. ಮುಖ್ಯಮಂತ್ರಿ ಕುಮಾರಸ್ವಾಮಿ ಹೇ‚ಳಿದರೆಂದು ಈ ವಯಸ್ಸಿನಲ್ಲಿ ನಾನು ನನ್ನ ತತ್ವ- ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಈಚೆಗೆ ರೇವಣ್ಣ ಸಹ ಭೇಟಿಯಾಗಿದ್ದು, ನನ್ನನ್ನು ಮಂತ್ರಿಯನ್ನಾಗಿಸುವ ಮಾತುಗಳನ್ನಾಡಿದ್ದಾರೆ. ಆದರೆ ನನಗೆ ಅದು ಇಷ್ಟವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next