Advertisement

ಬಜೆ ಹಿನ್ನೀರಿಗೆ ಶಾಸಕರ ಭೇಟಿ; ರೈತರಿಂದ ಅಹವಾಲು ​​​​​​​

12:30 AM Feb 17, 2019 | Team Udayavani |

ಮಣಿಪಾಲ: ಬಜೆ ಹಿನ್ನೀರನ್ನು ಭತ್ತ ಸಹಿತ ಕೃಷಿಗೆ ಪಂಪ್‌ ಮೂಲಕ ತೆಗೆಯುವುದನ್ನು ನಿರ್ಬಂಧಿಸಿ ವಿದ್ಯುತ್‌ ಕಡಿತಗೊಳಿಸಿದ ಜಿಲ್ಲಾಡಳಿತದ ಕ್ರಮದಿಂದಾಗಿ ರೈತರು ಕಂಗಾಲಾಗಿದ್ದು, ಶನಿವಾರ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಉಡುಪಿ ನಗರ ಸಭೆಯ ಆಯುಕ್ತರು ಹಾಗೂ ಅಭಿಯಂತರೊಂದಿಗೆ ಬಜೆ ಡ್ಯಾಂಗೆ ತೆರಳಿ ಅವಲೋಕನ ನಡೆಸಿದರು. 

Advertisement

ಬಳಿಕ ರೈತರ ಅಹವಾಲು ಆಲಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಸಭೆಯಲ್ಲಿ  ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು. ಮಂಗಳವಾರದ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ನಗರಕ್ಕೆ ನೀರು ಹೋಗಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. 

ರೈತರ ಆಕ್ರೋಶ
ಸ್ವರ್ಣೆಯ ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಡ್ಯಾಂನಿಂದಾಗಿ ನಮ್ಮ ಕೃಷಿ ಪ್ರದೇಶ ಮುಳುಗಡೆಯಾಗುತ್ತದೆ. ಕೊಳಕೆ ಬೆಳೆ ಕೈಗೆ ಬರುವ ಹೊತ್ತಿಗೆ ನೀರು ಬಳಕೆಗೆ ನಿರ್ಬಂಧ ಹೇರಲಾಗಿದೆ. ನಗರ ಸಭೆಯ ನೀರಿನ ಬೇಡಿಕೆ ಹೆಚ್ಚಾಗಿದ್ದರೂ ಹಿಂದಿನ ವ್ಯವಸ್ಥೆಯಲ್ಲೇ ನೀರು ಕೊಂಡೊಯ್ಯಲಾಗುತ್ತಿದೆಯೇ ಹೊರತು ಹೆಚ್ಚುವರಿ ವ್ಯವಸ್ಥೆಗೆ ಯಾವುತ್ತೂ ಕ್ರಮ ಕೈಗೊಂಡಿಲ್ಲ. ರೈತರನ್ನು ಸತಾಯಿಸುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದು ಡ್ಯಾಂ ಯಾರದ್ದು? ಅಧಿಕಾರಿಗಳಿಗೇ ಗೊಂದಲ!
ಬಜೆ ಮೊದಲ ಹಂತದ ಡ್ಯಾಂ ಬಳಿ ವಿದ್ಯುತ್‌ ಉತ್ಪಾದನೆ ಕಂಪೆನಿಯ ಡ್ಯಾಂ ಇದೆ. ಇಲ್ಲಿಗೆ ಶಾಸಕರೊಂದಿಗೆ ತೆರಳಿ ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ವಾಪಸಾದ ಬಳಿಕ ಇನ್ನೊಂದು ಡ್ಯಾಂ ಯಾರದ್ದು ಎಂಬ ಪತ್ರಕರ್ತರ ಪ್ರಶ್ನೆಗೆ ಅವರ ಮರುಪ್ರಶ್ನೆಯೇ ಉತ್ತರವಾಗಿತ್ತು. ಅಲ್ಲಿಂದ ನೀರನ್ನು ಬಳಸುತ್ತಿರುವ ನಗರಸಭೆಯ ಅಧಿಕೃತರಿಗೇ ಡ್ಯಾಂ ಯಾರದ್ದು ಎಂಬ ಸ್ಪಷ್ಟತೆ ಇಲ್ಲದೆ ಜಿಲ್ಲಾಡಳಿತದತ್ತ ಬೆರಳು ತೋರಿಸುವ ಸ್ಥಿತಿ  ಇರುವುದು ಶೋಚನೀಯ ಎಂದು ಸ್ಥಳದಲ್ಲಿದ್ದ ರೈತರು ಅಭಿಪ್ರಾಯಪಟ್ಟರು. 

ಜನವರಿಯಲ್ಲಿ 1.5 ಮೀಟರ್‌ ಏರಿಸಬೇಕು
ಜನವರಿ ವೇಳೆಗೆ ಬಜೆ ಇನ್ನೊಂದು ಡ್ಯಾಂನ ತಡೆಯನ್ನು 1.5 ಮೀ. ಏರಿಕೆ ಮಾಡಿದರೆ 1 ತಿಂಗಳಿಗೆ ಉಳಿಯುವಷ್ಟು ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ರೈತರು ಸಲಹೆ ನೀಡಿದರು. ಶೀರೂರಿನಲ್ಲಿರುವ 2ನೇ ಹಂತದ ಡ್ಯಾಂನಲ್ಲಿ ಲೀಕೇಜ್‌ ಇದೆ. ನೀರು ಸಂಗ್ರಹಕ್ಕೆ ಪೂರಕ ಸ್ಥಳ ಇಲ್ಲ. ಇದರಿಂದ ಹೆಚ್ಚೇನು ಪ್ರಯೋಜನವಿಲ್ಲ. ಹೆಚ್ಚುವರಿ ನೀರು ಸಂಗ್ರಹ ಯೋಜನೆ ರೂಪಿಸಲು ನಗರ ಸಭೆ/ ಜಿಲ್ಲಾಡಳಿತ ಯೋಚಿಸಬೇಕಿದೆ. 

Advertisement

ಸ್ಥಳದಲ್ಲಿ ಸುಮಾರು 50 ಮಂದಿ ರೈತರು, ತಾಪಂ ಸದಸ್ಯೆ ಸಂಧ್ಯಾ ಕಾಮತ್‌,  ಬೊಮ್ಮರಬೆಟ್ಟು ಗ್ರಾಪಂ ಪಿಡಿಒ ರಾಜಶೇಖರ್‌ ರಾವ್‌, ಉಪಾಧ್ಯಕ್ಷ ಹರೀಶ್‌ ಸಾಲಿಯಾನ್‌, ಸದಸ್ಯ ನಾರಾಯಣ ಪೂಜಾರಿ, ಪ್ರಕಾಶ್‌ ಕುಕ್ಕೆಹಳ್ಳಿ, ಉಮೇಶ್‌ ಶೆಟ್ಟಿ, ಶೇಖರ್‌ ಶೆಟ್ಟಿ, ಸಂತೋಷ್‌ ಕುಮಾರ್‌, ದೇವರಾಜ್‌ ಶಾಸಿŒ ಮತ್ತಿತರರಿದ್ದರು. 

ಕಟ್ಟಡ/ಗಾರ್ಡನ್‌ಗೆ ನೀರು ಬಿಡುತ್ತಾರೆ!
ಜೀವನಾಧಾರವಾದ ಬೆಳೆ ಕರಟುತ್ತಿದ್ದರೂ ಹಿನ್ನೀರು ಬಳಕೆಗೆ ನಿರ್ಬಂಧ ಹೇರಲಾಗಿದೆ. ಆದರೆ ನಗರದಲ್ಲಿ ಇದೇ ನೀರನ್ನು ಕಟ್ಟಡ ನಿರ್ಮಾಣಕ್ಕೆ, ಗಾರ್ಡನ್‌ಗೆ ಹರಿಸಲಾಗುತ್ತಿದೆ. ಇದನ್ನು ನಿಯಂತ್ರಿಸುವ ಸಾಧ್ಯವಾಗದ ಅಧಿಕಾರಿಗಳು ಬಡ ರೈತರ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ದೂರಿದರು.

ಶೀಘ್ರ ಕ್ರಮ 
ಜಿಲ್ಲಾಧಿಕಾರಿ ಮಂಗಳವಾರ ಸಭೆ ಕರೆದಿದ್ದಾರೆ.ವಾರದಲ್ಲಿ 2 ದಿನ ನೀರು ಬೇಕು ಎಂದು ರೈತರಿಂದ ಬೇಡಿಕೆ ಬಂದಿದೆ. ಡ್ಯಾಂ ಎತ್ತರ ಹೆಚ್ಚಿಸಿದ್ದಲ್ಲಿ ನೀರಿನ ಸಂಗ್ರಹ ಹೆಚ್ಚಲಿದೆ ಎಂಬ ಸಲಹೆಯೂ ಇದೆ. ಈ ಬಗ್ಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
– ಲಾಲಾಜಿ ಆರ್‌. ಮೆಂಡನ್‌,ಶಾಸಕ,ಕಾಪು

ಡಿಸಿ ಗಮನಕ್ಕೆ ತರಲಾಗುವುದು
ರೈತರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು.ನಗರ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ, ಗಾರ್ಡನ್‌ಗೆ ನೀರು ಬಿಡುವುದನ್ನು ನಿಲ್ಲಿಸಲಾಗುವುದು. ಹೆಚ್ಚುವರಿ ನೀರಿನ ಸಂಪರ್ಕ ನೀಡುತ್ತಿಲ್ಲ.
– ಆನಂದ ಸಿ.ಕಲ್ಲೋಳಿಕರ್‌,ನಗರಾಯುಕ್

Advertisement

Udayavani is now on Telegram. Click here to join our channel and stay updated with the latest news.

Next