Advertisement
ವಿಧಾನಸಭೆಯಲ್ಲಿ ಸಂಖ್ಯಾಬಲ ವೃದ್ಧಿ ದೃಷ್ಟಿಯಿಂದ ಎರಡು ವಿಧಾನಸಭಾ ಉಪಚುನಾವಣೆ ಗೆಲ್ಲುವುದು ಬಿಜೆಪಿಗೆ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ಹಿರಿಯ ನಾಯಕರು, ಮುಖಂಡರು ಎರಡೂ ಕ್ಷೇತ್ರಗಳಲ್ಲಿ ಬೀಡುಬಿಟ್ಟು ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಫಲಿತಾಂಶ ಆಧರಿಸಿ ಮುಂದೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇರಿ ಇತರೆ ಕೆಲ ಅತೃಪ್ತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತು ದಟ್ಟವಾಗಿ ಕೇಳಿಬರಲಾರಂಭಿಸಿದೆ.
Related Articles
Advertisement
ಇದರಿಂದ ಪಕ್ಷಕ್ಕೆ ಮತ್ತೆ “ಆಪರೇಷನ್ ಕಮಲ’ದ ಅಪಖ್ಯಾತಿ ಸುತ್ತಿಕೊಳ್ಳುತ್ತದೆ. ಆದರೆ ಕುಂದಗೋಳ, ಚಿಂಚೋಳಿ ಉಪಚುನಾವಣೆಯಲ್ಲಿ ಗೆದ್ದರೆ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಳವಾಗಲಿದೆ. ಹಾಗಾಗಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದವರಂತೆ ಯಡಿಯೂರಪ್ಪ ಹಾಗೂ ಇತರೆ ನಾಯಕರು ಕುಂದಗೋಳ, ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಒಂದೊಮ್ಮೆ ಎರಡು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಸೋಲಾದರೆ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಜನಾದೇಶವಿಲ್ಲ ಎಂಬ ವಿಚಾರದ ಮೇಲೆ ಬಿಜೆಪಿಯು ಆಡಳಿತಾರೂಢ ಪಕ್ಷಗಳ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ಇದರಿಂದ ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರು ಗೊಂದಲಕ್ಕೆ ಒಳಗಾದರೆ ಅವರ ವಿಶ್ವಾಸ ಗಳಿಸಿ ಲಾಭ ಪಡೆಯುವ ಲೆಕ್ಕಾಚಾರವೂ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ ಲೆಕ್ಕಾಚಾರ: ಅತೃಪ್ತರ ಪೈಕಿ ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿರುವುದರಿಂದ ಅವರು ಪಕ್ಷ ತೊರೆಯುವುದು ಖಚಿತ. ಉಳಿದ ಅತೃಪ್ತರು ಲೋಕಸಭೆ ಹಾಗೂ ಎರಡು ವಿಧಾನಸಭಾ ಉಪಚುನಾವಣೆ ಫಲಿತಾಂಶ ಎದುರು ನೋಡುತ್ತಿದ್ದಾರೆ. ಫಲಿತಾಂಶ ಏನೇ ಇದ್ದರೂ ಹತ್ತಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಖ್ಯ ಇಟ್ಟಕೊಂಡಿದ್ದು, ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳಾಗುವ ನಿರೀಕ್ಷೆಯಿದೆ.
ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್ಕಾರ ರಚನೆ ಅವಕಾಶ ಸಿಗುವ ವಿಶ್ವಾಸ ಮೂಡಿ ಅತೃಪ್ತರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಹಾಗಾಗಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಶುರುವಾದರೂ ಆಶ್ಚರ್ಯವಿಲ್ಲ. ರಾಜಕೀಯ ಬೆಳವಣಿಗೆ ಆಧರಿಸಿ ಪಕ್ಷ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
* ಎಂ. ಕೀರ್ತಿಪ್ರಸಾದ್