ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರ ಖರೀದಿ ನಡೆಯುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿಯೇ ಈ ದಾಳಿ ನಡೆದಿರಬಹುದು ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ. ಐಟಿ ಇಲಾಖೆ ಕಣ್ಣು ತಮ್ಮ ಮೇಲೂ ಬಿದ್ದರೆ ಕಷ್ಟ ಎಂಬ ಆತಂಕದಿಂದ ಗುಜರಾತ್‌ಗೆ ವಾಪಸ್ ಹೋಗುತ್ತೇವೆ, ಕಳುಹಿಸಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಇದೇ 8 ರಂದು ಗುಜರಾತ್‌ನಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಏಳರ ವರೆಗೂ ಅಲ್ಲಿನ ಶಾಸಕರನ್ನು ಇಲ್ಲೇ ಇರಿಸಿಕೊಳ್ಳುವ ಜವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್‌ಗೆ ವಹಿಸಲಾಗಿದೆ. ಬುಧವಾರ ಬೆಳಗ್ಗೆ ವರೆಗೆ 44ಶಾಸಕರ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ನೋಡಿಕೊಂಡಿದ್ದರು. ಆರಂಭದಲ್ಲಿ ಖುಷಿಯಾಗಿದ್ದ ಶಾಸಕರು ಐಟಿ ದಾಳಿಯಿಂದ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ, ಐಟಿ ಇಲಾಖೆ ಮೂಲಕ ತಮ್ಮ ಮನೆಗಳ ಮೇಲೆಯೂ ದಾಳಿ ನಡೆಸಿದರೆ ಎದುರಿಸುವುದು ಕಷ್ಟವಾಗಲಿದೆ. ನಮ್ಮನ್ನು ಹೋಗಲು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂವರು ಶಾಸಕರು ಆಸ್ಪತ್ರೆಗೆ:
ಅನಾರೋಗ್ಯದ ಕಾರಣದಿಂದ ಮೂವರು ಶಾಸಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಸಕರಾದ ಪಟೇಲ್ ಜೋಯಿತಾ ಭಾಯ್, ಕಾನಾಭಾಯ್, ಪರಮಾರ್ ರಾಜೇಂದ್ರ ಸಿನ್ಹ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಜ್ವರದಿಂದ ಬಳಲುತ್ತಿದ್ದು, ಒಬ್ಬರು ಲೋ ಬಿಪಿಯಿಂದ ಬಳಲುತ್ತಿದ್ದರು. ಇಬ್ಬರು ಶಾಸಕರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಅಲ್ಲದೇ ಶಾಸಕರನ್ನು ಆಸ್ಪತ್ರೆಗೆ ದಾಖಲು ಮಾಡಿರುವುದರಿಂದ ಐಸಿಯುನಲ್ಲಿದ್ದ ಇತರ ರೋಗಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದ್ದು, ಐಸಿಯು ಸುತ್ತ ಮಫ್ತಿಯಲ್ಲಿ ಪೊಲಿಸರನ್ನು ನಿಯೋಜಿಸಲಾಗಿದೆ. ಶಾಸಕರ ಆತಂಕವನ್ನು ಅರಿತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದು, ಹೈಕಮಾಂಡ್ ಆದೇಶದಂತೆ ಚುನಾವಣೆ ನಡೆಯುವವರೆಗೂ ರಾಜ್ಯದಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಅಲ್ಲದೇ ಇಲ್ಲಿ ವಾಸ್ತವ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
Advertisement