ಚಿಕ್ಕಬಳ್ಳಾಪುರ: ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಜೆಡಿಎಸ್ ಶಾಸಕರಾದ ಶಿಡ್ಲಘಟ್ಟದ ಎಂ.ರಾಜಣ್ಣ ಹಾಗೂ ಚಿಂತಾಮಣಿಯ ಜೆ.ಕೆ.ಕೃಷ್ಣಾರೆಡ್ಡಿ ಅವರು ದಿಢೀರ್ ಎಂದು ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.
ಕಾಂಗ್ರೆಸ್ ಸದಸ್ಯರ ಆಕ್ಷೇಪ: ಸಭೆ ಆರಂಭಗೊಂಡ ಬಳಿಕ ಆಗಮಿಸಿದ ಶಾಸಕದ್ವಯರು ವೇದಿಕೆ ಮೇಲೆ ತಮ್ಮ ಹೆಸರಿದ್ದ ನಾಮಫಲಕಗಳ ಎದುರಿನ ಕುರ್ಚಿಗಳಲ್ಲಿ ಆಸೀನರಾದರು. ಆದರೆ, ಶಾಸಕರು ಜಿಪಂ ಸಹ ಸದಸ್ಯರು ಆಗಿರುವುದರಿಂದ ವೇದಿಕೆ ಮೇಲೆ ಕೂರಬಾರದು. ಅವರು ನಮ್ಮಂತೆ ಕೆಳಗೆ ಕೂರಬೇಕೆಂದು ಬಾಗೇಪಲ್ಲಿ ಹಾಗೂ ಚಿಂತಾಮಣಿಯ ಕೆಲ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಮುಜುಗರಕ್ಕೆ ಒಳಗಾದ ಶಾಸಕರು ಸಭೆಯಿಂದ ಹೊರ ನಡೆದರು.
ಕಾನೂನು ಗೌರವಿಸಿದ್ದೇವೆ: ಈ ಕುರಿತು ಪ್ರತಿಕ್ರಿಯೆ ನೀಡಿದ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜಿಪಂ ಸಾಮಾನ್ಯ ಸಭೆಗೆ ತಾವು ಇದೇ ಮೊದಲ ಬಾರಿಗೆ ಹೋಗಿದ್ದೆವು. ವೇದಿಕೆ ಮೇಲೆ ತಮ್ಮ ಹೆಸರಿನ ನಾಮಫಲಕಗಳನ್ನು ಇಟ್ಟಿದ್ದರಿಂದ ಆ ಸೀಟಿನಲ್ಲಿ ಕುಳಿತಿದ್ದೆವು. ಆದರೆ, ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ ತಾವು ಕಾನೂನು ಗೌರವಿಸುವ ಕೆಲಸ ಮಾಡಿದ್ದೇವೆ. ಆದರೆ, ಅಧಿಕಾರಿಗಳು ತಮ್ಮ ಹೆಸರಿನ ನಾಮಫಲಕಗಳನ್ನು ವೇದಿಕೆ ಮೇಲೆ ಏಕೆ ಇಟ್ಟರೆಂದು ಅರ್ಥವಾಗಲಿಲ್ಲ ಎಂದು ಹೇಳಿದರು.
ಸಾಮಾನ್ಯ ಸಭೆ ಸುಸೂತ್ರ: ಸ್ವಪಕ್ಷೀಯ ಸದಸ್ಯರ ಬಹಿಷ್ಕಾರ, ಕೊರಂ ಕೊರತೆ ಮತ್ತಿತರ ಕಾರಣಗಳಿಗೆ ವರ್ಷದಿಂದ ಮುಂದೂಡುತ್ತಲೇ ಬಂದಿದ್ದ ಜಿಪಂ ಸಾಮಾನ್ಯ ಸಭೆ ಕೊನೆಗೂ ಶನಿವಾರ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅಧ್ಯಕ್ಷತೆಯಲ್ಲಿ ಸುಸೂತ್ರವಾಗಿ ನಡೆಯಿತು. ಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅತೃಪ್ತ ಸದಸ್ಯರು ಪಾಲ್ಗೊಂಡಿದ್ದರಿಂದ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಸಭೆ ನಡೆಯಿತು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ನಿರ್ಮಲಾ, ಜಿಪಂ ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ, ಮುಖ್ಯ ಲೆಕ್ಕಾಧಿಕಾರಿ ಡಾ.ನಾಗೇಶ್ ಸೇರಿದಂತೆ ಜಿಪಂ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.