Advertisement
ರೆಸಾರ್ಟ್ ರಾಜಕಾರಣ: ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಮತ ಎಣಿಕೆ ಮುಗಿದು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ನಾಯಕರ ಸೂಚನೆ ಮೇರೆಗೆ ಬೆಂಗಳೂರು ಸೇರಿಕೊಂಡ ಶಾಸಕರು, ರಾಜಧಾನಿಯಲ್ಲಿನ ರೆಸಾರ್ಟ್‌ಗಳನ್ನು ಬದಲಾಯಿಸುತ್ತಿದ್ದಾರೆಯೇ ಹೊರತು ಕ್ಷೇತ್ರಗಳಿಗೆ ತೆರಳಲು ಪಕ್ಷದ ನಾಯಕರು ಬಿಡುತ್ತಿಲ್ಲ. ಹೀಗಾಗಿ ನೂತನ ಶಾಸಕರಿಗೆ ಹತ್ತು ದಿನಗಳಿಂದ ರೆಸಾರ್ಟ್‌ನಲ್ಲಿರಿಸಲಾಗಿದೆ.
Related Articles
Advertisement
ಮಂತ್ರಿ ಪಟ್ಟಕ್ಕೆ ಮುಂದುವರಿದ ಪ್ರಯತ್ನ: ವಿಶ್ವಾಸ ಮತ ಯಾಚನೆ ಬಳಿಕವೂ ಮೈಸೂರು ಜಿಲ್ಲೆಯ ಬಹುತೇಕ ಶಾಸಕರು ತಕ್ಷಣಕ್ಕೆ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಕಡಿಮೆ ಇದೆ. ಜೆಡಿಎಸ್‌ನ ಐವರು ಶಾಸಕರ ಪೈಕಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿರುವ ಜಿ.ಟಿ.ದೇವೇಗೌಡ, ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ರಾಜಕೀಯ ಮರುಜನ್ಮ ಪಡೆದಿರುವ ಎಚ್.ವಿಶ್ವನಾಥ್, ಕೆ.ಆರ್.ನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಸಾ.ರಾ.ಮಹೇಶ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಇನ್ನು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ತನ್ವೀರ್, ಅಲ್ಪಸಂಖ್ಯಾತರ ಕೋಟಾದಲ್ಲಿ ಮೈತ್ರಿ ಸರ್ಕಾರದಲ್ಲಿ ಮತ್ತೂಮ್ಮೆ ಮಂತ್ರಿ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಅವರ ಪುತ್ರ ಡಾ.ಯತೀಂದ್ರ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಕೇಳಿ ಬಂದಿದೆ.
ಹೀಗಾಗಿ ಶುಕ್ರವಾರ ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸಿದ ಬಳಿಕವೂ ಮಂತ್ರಿ ಮಂಡಲ ರಚನೆಯಾಗುವವರೆಗೆ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಈ ಐವರು ಶಾಸಕರು ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಕಡಿಮೆ. ಇದೇ ಪ್ರಥಮ ಬಾರಿಗೆ ಗೆದ್ದಿರುವ ತಿ.ನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್, ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಮಹೇವ್, ಎಚ್.ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಶನಿವಾರ ಕ್ಷೇತ್ರಕ್ಕೆ ಬರಲಿದ್ದಾರೆ ಎಂದು ಸ್ಥಳೀಯ ಮುಖಂಡರು ಹೇಳುತ್ತಾರೆ.
* ಗಿರೀಶ್ ಹುಣಸೂರು