Advertisement

“ಬಿಜೆಪಿ ಸಂಪರ್ಕದಲ್ಲಿ ವಿವಿಧ ಪಕ್ಷಗಳ ಶಾಸಕರು’

07:35 AM May 30, 2020 | Lakshmi GovindaRaj |

ಹಾವೇರಿ: ಬೇರೆ ಬೇರೆ ಪಕ್ಷಗಳ 15-20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಅವರನ್ನು ಸೇರಿಸಿಕೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ಚಿಂತನೆ ಪಕ್ಷದಲ್ಲಿ ನಡೆದಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಶುಕ್ರವಾರ  ಮಾಧ್ಯಮದವರೊಂದಿಗೆ ಮಾತ ನಾಡಿ, ಬಿಜೆಪಿ ವರ್ಚಸ್ಸು ಇರೋದರಿಂದಲೇ ಬೇರೆ ಪಕ್ಷಗಳ ಶಾಸಕರು ಬಿಜೆಪಿಗೆ ಬರಲು ಮುಂದಾಗಿದ್ದಾರೆ. ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳಲಿದೆ  ಎಂದರು.

Advertisement

ಬಿಜೆಪಿ ಶಾಸಕರ ರಹಸ್ಯ ಸಭೆ ವಿಚಾರವಾಗಿ ಉಮೇಶ ಕತ್ತಿಯವರೇ ಸ್ಪಷ್ಟನೆ ನೀಡಿದ್ದಾರೆ. ಉತ್ತರ ಕರ್ನಾಟಕದ ಅನೇಕ  ಶಾಸಕರು ಊಟಕ್ಕೆ ಸೇರಿದ್ದೇವೆ. ಇದರಲ್ಲಿ ಯಾವುದೇ ಭಿನ್ನಮತವಿಲ್ಲ. ಯಾವುದೇ ಕಾರ್ಯಾಚರಣೆಯೂ ಇಲ್ಲ ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಆ ಬಗ್ಗೆ  ನಾನು ಹೇಳುವುದು ಏನೂ ಇಲ್ಲ ಎಂದರು. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ಸವದಿ ಹೇಳಿದರು.

ಸಮಸ್ಯೆ ಇದ್ದರೆ ಸಿಎಂ ಜತೆ ಕುಳಿತು ಬಗೆಹರಿಸಿಕೊಳ್ಳಿ: ಸುರೇಶ ಅಂಗಡಿ
ಬೆಳಗಾವಿ: ಬಿಜೆಪಿಯಲ್ಲಿ ಭಿನ್ನಮತಕ್ಕೆ ಅವಕಾಶ ಇಲ್ಲ. ಯಾವುದೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿಗಳ ಜೊತೆ ಕುಳಿತು ಬಗೆಹರಿಸಿಕೊಳ್ಳಬೇಕು. ಆದರೆ ಬಹಿರಂಗ ಹೇಳಿಕೆ ನೀಡು ವುದು ಸರಿಯಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ  ಅಂಗಡಿ ಅವರು ಕತ್ತಿ ಸಹೋದರರಿಗೆ ಟಾಂಗ್‌ ನೀಡಿದರು. ಶಾಸಕ ಉಮೇಶ ಕತ್ತಿ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಶಾಸಕರನ್ನು ಊಟಕ್ಕೆ ಆಹ್ವಾನಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಾದರೂ ಊಟಕ್ಕೆ ಕರೆದರು ಎಂದರೆ  ಭಿನ್ನಮತ ಇದೆ ಎಂದು ಭಾವಿಸುವುದು ತಪ್ಪು. ನಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಬಗೆಹರಿಸುತ್ತಾರೆ ಎಂದರು.

ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಬಿಜೆಪಿ ಶಾಸಕರಾದ ಉಮೇಶ್‌ ಕತ್ತಿ, ಮುರುಗೇಶ್‌‌ ನಿರಾಣಿ, ಯತ್ನಾಳ್‌ ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ.
-ಕೆ.ಎಸ್‌.ಈಶ್ವರಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next