ವಿಜಯಪುರ: ಜಿಂದಾಲ್ ಕೈಗಾರಿಕಾ ಸಂಸ್ಥೆಗೆ ನೀಡಿದ ಮಾದರಿಯಲ್ಲೇ ಶ್ರೀಸಿದ್ಧೇಶ್ವರ ಸಂಸ್ಥೆಯ ಗೋಶಾಲೆಗೆ 500 ಎಕರೆ ಜಮೀನು ನೀಡುವಂತೆ ಶ್ರೀಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದಲ್ಲಿ ಶ್ರೀಸಿದ್ಧೇಶ್ವರ ಸಂಸ್ಥೆಯಿಂದ ನಡೆಯುತ್ತಿರುವ ಗೋಶಾಲೆ ಸಾವಿರಕ್ಕೂ ಅಧಿಕ ಗೋವುಗಳಿಗೆ ಆಸರೆ ನೀಡಿದೆ. ಭವಿಷ್ಯದಲ್ಲಿ ನಮ್ಮ ಸಂಸ್ಥೆ ದೇಶಿ ಗೋವುಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಗೋವುಗಳನ್ನು ಸಂರಕ್ಷಿಸುವ ಗೋಶಾಲೆ ಸ್ಥಾಪನೆ ಉದ್ದೇಶಿಸಿದೆ ಎಂದಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಕ್ಷೇಪ
ಜಿಂದಾಲ್ ಕಂಪನಿಗೆ ಪ್ರತಿ ಎಕರೆ ಭೂಮಿಗೆ 1.5 ಲಕ್ಷ ರೂ. ಮೊತ್ತದಲ್ಲಿ ಜಮೀನು ನೀಡಿದೆ. ನಾವು ಪ್ರತಿ ಎಕರೆಗೆ 2 ಲಕ್ಷ ರೂ. ನೀಡಲು ಸಿದ್ಧವಿದ್ದು, ಜಿಂದಾಲ್ ಕಂಪನಿಗೆ ವಿಧಿಸಿರುವ ಷರತ್ತಿನಂತೆ ನಾವೂ ಷರತ್ತು ಪಾಲಿಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೇ ರಾಜ್ಯದ ಯಾವುದೇ ಪ್ರದೇಶದಲ್ಲಿ ಜಮೀನು ನೀಡಿದರೂ ದೇಶಿ ಗೋ ಸಂರಕ್ಷಣೆಗಾಗಿ ಗೋಶಾಲೆ ತೆರೆಯಲು ಸಿದ್ಧ ಎಂದೂ ಪತ್ರದಲ್ಲಿ ವಿವರಿಸಿದ್ದು, ಬಸವರಾಜ ಬೊಮ್ಮಾಯಿ, ಜಗದೀಶ ಶಟ್ಟರ್, ಆರ್.ಅಶೋಕ್ ನೇತೃತ್ವದ ಸಮಿತಿಗೆ ಅರ್ಜಿ ರವಾನಿಸಿ, ಜಿಂದಾಲ್ ಗೆ ನೀಡಿದಂತೆ ತ್ವರಿತವಾಗಿ ಶ್ರೀಸಿದ್ಧೇಶ್ವರ ಸಂಸ್ಥೆಯ ಉದ್ಧೇಶಿತ ಗೋಶಾಲೆಗೆ ಜಮೀನು ಮಂಜೂರು ಮಾಡುವಂತೆ ಪತ್ರದಲ್ಲಿ ಯತ್ನಾಳ್ ಕೋರಿದ್ದಾರೆ.