ವಿಜಯಪುರ: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕೊಡದೇ ಕಡೆಗಣಿಸಲಾಗಿದೆ. ಹೀಗಾಗಿ ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಆಗ್ರಹಿಸಿರುವುದು ಸೂಕ್ತವಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ಮಾಳ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ವಿವಿಧ ಇಲಾಖೆಗಳ ಆಯಕಟ್ಟಿನ ಸ್ಥಳಗಳಲ್ಲಿ ಲಿಂಗಾಯತ ಅಧಿಕಾರಿಗಳನ್ನು ತೆಗೆದು, ಓಲೈಕೆಗಾಗಿ ಅಲ್ಪಸಂಖ್ಯಾತ ಅಧಿಕಾರಿಗಳನ್ನು ತಂದು ಕೂಡಿಸಿದ್ದಾರೆ ಎಂದು ಯತ್ನಾಳ ದೂರಿದರು.
ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಮುಕ್ತ ಬೆಂಬಲ ನೀಡಿದ್ದರಿಂದಲೇ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಬಂದಿವೆ.ಶಾಮನೂರು ಶಿವಶಂಕರಪ್ಪ ಸತ್ಯ ಹೇಳಿದ್ದು, ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದಾಗಿ ಬಿ.ಆರ್.ಪಾಟೀಲ, ಬಸವರಾಜ ರಾಯರೆಡ್ಡಿ ಧ್ವನಿ ಎತ್ತಿದರೂ ಏನೂ ಆಗಲಿಲ್ಲ. ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರಿಗೆ ನನ್ನಂತೆ ಮಾತನಾಡುವ ಧೈರ್ಯವಿಲ್ಲ ಎಂದು ಛೇಡಿಸಿದರು.
ಮಹಮ್ಮದ ಪೈಗಂಬರ್ ಜನ್ಮದಿನ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ನನ್ನ ಭಸವಚಿತ್ರ ಇರುವ ಬ್ಯಾನರ್ ಹರಿದಿರುವುದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯ ಹತಾಶೆಗೆ ಸಾಕ್ಷಿ. ಸೋತಾಗಲೇ ನಗರದಲ್ಲಿ ಇಂಥ ಪರಿಸ್ಥಿತಿ ಇದ್ದು, ಒಂದೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ ಎಂದರು.