ವಿಜಯಪುರ: ರಾಜ್ಯದ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರಿಂದ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಉತ್ತರಿಸಿದ್ದಾರೆ. ತಲೆ ಎತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸರ್ಕಾರ ಶಾಶ್ವತ ಪರಿಹಾರ ನೀಡಲು ಸಮವಸ್ತ್ರ ನೀತಿಯನ್ನು ಪಾಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಮುಸ್ಲಿಂಮರಿಗೆ ನೀಡಿದ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ದೇಶದಲ್ಲಿ ಪ್ರಧಾನಿ ಮೋದಿ ಅವರ ಬಿಜೆಪಿ ಸರ್ಕಾರ ಇರುವ ಕಾರಣ ಇನ್ನು ಇಂಥದೆಲ್ಲ ನಡೆಸಲು ಅವಕಾಶವಿಲ್ಲ ಎಂದರು.
ಸಚಿವ ಸ್ಥಾನ ನೀಡಿ, ಗೃಹ ಖಾತೆ ಕೊಡಿ ಎಂದು ಎಲ್ಲಿಯೂ ಯಾರ ಬಳಿಯೂ ಕೇಳಿಲ್ಲ. ಒಂದೊಮ್ಮೆ ಸಚಿವ ಸ್ಥಾನ ನೀಡಿ ಗೃಹ ಖಾತೆ ನೀಡಿದರೆ ರಾಜ್ಯದಲ್ಲಿ ಕಾಲೇಜುಗಳಲ್ಲಿ ತಲೆ ಎತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ತೆರೆ ಎಳೆಯುತ್ತೇನೆ ಎಂದರು.
ಇದನ್ನೂ ಓದಿ:ರಾಜ್ಯ ಬಜೆಟ್ ಬಳಿಕ ಸಚಿವ ಸಂಪುಟ ವಿಸ್ತರಣೆ: ಬಸನಗೌಡ ಪಾಟೀಲ ಯತ್ನಾಳ
ಮುಸ್ಲಿಂ ಸಮುದಾಯದ ವಿವಾಹಿತ ಮಹಿಳೆಯರು ಅನುಭವಿಸುತ್ತಿದ್ದ ತ್ರಿಬಲ್ ತಲಾಕ್ ಮೂಲಕ ಶೋಷಣೆಗೆ ಕಡಿವಾಣ ಹಾಕಲಾಗಿದೆ. ಮುಸ್ಲಿಂ ಮಹಿಳೆಯರೇನು ಎಷ್ಟು ಬೇಕಾದರೂ ಮಕ್ಕಳು ತಯಾರಿಸುವ ಫ್ಯಾಕ್ಟಿರಿಯಾ ಎಂದು ಪ್ರಶ್ನಿಸಿದ ಯತ್ನಾಳ, ದೇಶದಲ್ಲಿ ಪರಿಸ್ಥಿತಿ ಹಿಂದಿನಂತಿಲ್ಲ. ಇದೀಗ ಯುವಶಕ್ತಿ ಜಾಗೃತವಾಗಿದ್ದು, ದೇಶಭಕ್ತಿ ಜಾಗೃತವಾಗಿದೆ ಎಂದರು.
ರಾಜ್ಯ ಸರ್ಕಾರ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಭಾರತ ದೇಶ ಯೋಗ್ಯವಲ್ಲ ಎನ್ನುವರು ಜನ್ನತ್ ಅಥವಾ ಪಾಕಿಸ್ತಾನಕ್ಕೆ ಹೋಗಬೇಕು. ಈ ಮಾತು ದೇಶ ವಿರೋಧಿ ಚಟುವಟಿಕೆ ಮಾಡುವರಿಗೆ ಮಾತ್ರ ಅನ್ವಯವೇ ಹೊರತು, ದೇಶಪ್ರೇಮಿ ಮುಸ್ಲೀಮರಿಗೆ ಅನ್ವಯಿಕೆ ಅಲ್ಲ ಎಂದರು.