ಸಿಂಧನೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ದಿಢೀರ್ ಭೇಟಿದ ವೇಳೆ ಸಿಬ್ಬಂದಿ ಗೈರು ಕಂಡು ಶಾಸಕ ವೆಂಕಟರಾವ್ ನಾಡಗೌಡ ಅವರು, ಸಿಬ್ಬಂದಿಯನ್ನು ಕರೆಯಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಶಾಸಕರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಡಿ ಗ್ರೂಪ್ ನೌಕರರು ಕಣ್ಣಿಗೆ ಬೀಳಲಿಲ್ಲ. ವೈದ್ಯರು ಕೂಡ ಇರಲಿಲ್ಲ. ಬೇಸರಗೊಂಡ ಶಾಸಕರು ತಕ್ಷಣವೇ ಮುಖ್ಯವೈದ್ಯಾಧಿಕಾರಿ ಡಾ.ಹನುಮಂತರಡ್ಡಿ ಅವರನ್ನು ಕರೆಯಿಸಿದರು.
ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಎಲ್ಲ ವರ್ಗಕ್ಕೆ ಹೆಸರಿಗೆ ಮಾತ್ರ ಮಂತ್ರಿ ಸ್ಥಾನ: ಮಲ್ಲಿಕಾರ್ಜುನ ಖರ್ಗೆ
ಬೀಗ ಹಾಕ್ಲಾ ಆಸ್ಪತ್ರೆಗೆ? :
25 ಡಿ ಗ್ರೂಪ್ ಸಿಬ್ಬಂದಿ ಇದ್ದಾರೆ ಎಂದು ಹೇಳುತ್ತೀರಿ. ಒಬ್ಬರೂ ಆಸ್ಪತ್ರೆಯಲ್ಲಿ ಇಲ್ಲ. ಎಲ್ಲೆಂದರಲ್ಲಿ ಕಸ ಬಿದ್ದರೂ ತೆಗೆದಿಲ್ಲ. ಅವರನ್ನೆಲ್ಲ ಕೂಡಿಸಿ ಬಿಟ್ಟಿ ಸಂಬಳ ಕೊಡಬೇಕಾ? ಎಂದು ಶಾಸಕರು ಖಾರವಾಗಿ ಪ್ರಶ್ನಿಸಿದರು. ಜನರಿಂದ ನನಗೆ ದೂರು ಬರುತ್ತಿವೆ. ಅವರಿಗೆ ಏನೆಂದು ಉತ್ತರಿಸಲಿ. ನಾನೇ ಆಸ್ಪತ್ರೆಗೆ ಬೀಗ ಹಾಕಿ, ಪ್ರತಿಭಟಿಸುತ್ತೇನೆ. ಬೇಕಾದ್ರೆ ಮಂತ್ರಿಗಳೇ ಬಂದು ಇಲ್ಲಿ ಸರಿಪಡಿಸಲಿ ಎಂದು ವೈದ್ಯರಿಗೆ ಎಚ್ಚರಿಸಿದರು.
ಡಿಎಚ್ ಒರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಶಾಸಕನಾಗಿ ನಾನೇ ಬಂದಾಗ ಇಲ್ಲಿ ಸಿಬ್ಬಂದಿಯಿಲ್ಲ. ಈ ಅವ್ಯವಸ್ಥೆಯನ್ನು ಬೇಗ ಸರಪಡಿಸಿ ಎಂದರು. ತಡವಾಗಿ ಆಗಮಿಸಿದ ವೈದ್ಯರೊಬ್ಬರ ವಿರುದ್ದವೂ ಹರಿಹಾಯ್ದ, ಕರೆ ಮಾಡಿ ತಿಳಿಸಿದರೂ ತಡವಾಗಿ ಬಂದಿದ್ದೀರಿ. ಇನ್ನು ರೋಗಿಗಳ ಕೂಗು ನಿಮ್ಮ ಕಿವಿಗೆ ಬೀಳುತ್ತದಾ? ಎಂದು ಗರಂ ಆದರು.
ನಗರಸಭೆ ಸದಸ್ಯ ಕೆ.ಹನುಮೇಶ ಸೇರಿದಂತೆ ಇತರರು ಇದ್ದರು.