ವರದಿ : ಶ್ರೀಶೈಲ ಕೆ.ಬಿರಾದಾರ
ಬಾಗಲಕೋಟೆ: ಕೊರೊನಾ ಅಲೆಯ ಸಂಕಷ್ಟ ಎದುರಿಸಲು ಇಲ್ಲಿನ ಜಿಲ್ಲಾ ಕೇಂದ್ರ ಬಾಗಲಕೋಟೆಯ ಶಾಸಕರೂ ಆಗಿರುವ ಬಿವಿವಿ ಸಂಘದ ಡಾ|ವೀರಣ್ಣ ಚರಂತಿಮಠ ಹಾಗೂ ಪ್ರತಿಷ್ಠಿತ ಬಿವಿವಿ ಸಂಘ, ಜಿಲ್ಲಾಡಳಿತಕ್ಕೆ ಹೆಗಲಿಗೆ ಹೆಗಲು ಕೊಟ್ಟು ಸೇವೆಗೆ ಮುಂದಾಗಿದೆ.
ಹೌದು. ಜಿಲ್ಲಾಸ್ಪತ್ರೆಯಲ್ಲಿ 23 ಜನ ತಜ್ಞ ವೈದ್ಯರು ಹಾಗೂ 450 ಬೆಡ್‌ಗಳ ವ್ಯವಸ್ಥೆ ಇದ್ದು, ಇದು ಸಂಪೂರ್ಣ ಕೊರೊನಾ ಚಿಕಿತ್ಸೆಗೆ ಮೀಸಲಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಕೊರತೆ ಎದುರಾದಾಗ ತಕ್ಷಣ ಸ್ಪಂದಿಸಿದ್ದು ಕುಮಾರೇಶ್ವರ ಆಸ್ಪತ್ರೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಹೊರತುಪಡಿಸಿ ಉಳಿದೆಲ್ಲ ರೋಗಕ್ಕೆ ನೀಡುತ್ತಿದ್ದ ಚಿಕಿತ್ಸೆಯನ್ನು ಕುಮಾರೇಶ್ವರ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.
ವೈದ್ಯರ ಎರವಲು ಸೇವೆ: ಕುಮಾರೇಶ್ವರ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ಚಿಕಿತ್ಸೆ ಕೇಂದ್ರ ಆರಂಭಿಸಿ, ನೂರಾರು ವೈದ್ಯರು ಸೇವೆ ನೀಡುತ್ತಿದ್ದಾರೆ. ಇದರ ಜತೆಗೆ ಕೊರೊನೇತರ ರೋಗಕ್ಕೆ ಚಿಕಿತ್ಸೆ ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗಾಗಿ ಬೇಕಾಗಿದ್ದ ಮೈಕ್ರೋ ಬಯೋಲಾಜಿಸ್ಟ್ ತಜ್ಞ ವೈದ್ಯರ ಕೊರತೆ ಇತ್ತು. ಈ ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಕುಮಾರೇಶ್ವರ ಆಸ್ಪತ್ರೆಯಲ್ಲಿದ್ದ ಮೈಕ್ರೋ ಬಯೋಲಾಜಿಸ್ಟ್ ತಜ್ಞ ವೈದ್ಯರೊಬ್ಬರನ್ನು ಜಿಲ್ಲಾ ಆಸ್ಪತ್ರೆಯ ಕೊರೊನಾ ತಪಾಸಣೆ ವಿಭಾಗಕ್ಕೆ ನಿಯೋಜನೆ ಮಾಡಿದ್ದಾರೆ. ವೇತನವನ್ನು ಬಿವಿವಿ ಸಂಘದಿಂದ ನೀಡಿದರೂ, ಸೇವೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಸಲ್ಲಿಸಿ ಬಡ ಜನ ರೋಗಿಗಳಿಗೆ ಅನುಕೂಲ ಕಲ್ಪಿಸಲು ಡಾ|ಚರಂತಿಮಠರು ದಿಟ್ಟ ನಿಲುವು ಕೈಗೊಂಡಿದ್ದಾರೆ.
ಹಳ್ಳಿಗಳಿಗೆ ದೌಡಾಯಿಸಿದ ವೈದ್ಯರ ತಂಡ: ಮೊದಮೊದಲು ನಗರಕ್ಕೆ ಸಿಮೀತವಾಗಿದ್ದ ಕೊರೊನಾ ಸೋಂಕು ಇದೀಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣವೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು ಆಗಿತ್ತು. ಈ ಸಂದರ್ಭದಲ್ಲೂ ಚರಂತಿಮಠ ನೇತೃತ್ವದ ಕುಮಾರೇಶ್ವರ ಆಸ್ಪತ್ರೆಯ ವೈದ್ಯರ ತಂಡ ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟಿದೆ. ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ 100ಕ್ಕೂ ಹೆಚ್ಚು ವೈದ್ಯರು, ತಲಾ ಇಬ್ಬರು ವೈದ್ಯರು-ಹಿರಿಯ ಶುಶ್ರೂಕಿಯರ ತಂಡ ರಚಿಸಿದ್ದು, ಈ ತಂಡ ಪ್ರತಿ ಹಳ್ಳಿ ಹಳ್ಳಿಯ ಮನೆ ಮನೆಗೆ ತೆರಳಿ ಸೋಂಕಿತರ ಸರ್ವೇ ನಡೆಸುತ್ತಿದ್ದಾರೆ.
ಜತೆಗೆ ಪ್ರತಿಯೊಂದು ಮನೆಯಲ್ಲಿ ಇರುವ ವ್ಯಕ್ತಿಗಳ ವಿವರ, ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರೆ ಅವರ ವಿವರ ದಾಖಲಿಸುವ ಜತೆಗೆ ಸೋಂಕಿನ ಲಕ್ಷಣಗಳಿದ್ದರೆ ಅವರಿಗೆ ಅಗತ್ಯ ಚಿಕಿತ್ಸೆ ಪಡೆಯಲು ನಿರ್ದೇಶನ ಕೂಡ ನೀಡುತ್ತಿದ್ದಾರೆ. ಇದು ಜಿಲ್ಲಾಡಳಿತದ ಕಾರ್ಯಕ್ಕೆ ಬಹುದೊಡ್ಡ ಹೆಗಲು ಕೊಟ್ಟಂತಾಗಿದೆ.