Advertisement

ಭ್ರಷ್ಟಾಚಾರ ರಹಿತ ರಾಜಕೀಯ ಬಿಜೆಪಿಯ ಹೆಮ್ಮೆ: ವೇದವ್ಯಾಸ್ ಕಾಮತ್

05:28 PM Apr 16, 2019 | keerthan |

ಮಂಗಳೂರು : ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ದೇಶದ ಆಡಳಿತ ವ್ಯವಸ್ಥೆಯಲ್ಲಿ ಹಿಂದೆಂದು ಕಾಣದ ಬದಲಾವಣೆ ತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ದ.ಕ.ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ಇದೇ ಆದರ್ಶವನ್ನು ಪಾಲಿಸಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆದರ್ಶ ಯುವ ನಾಯಕ ಎಂದು ಗುರುತಿಕೊಂಡಿರುವುದು ಬಿಜೆಪಿಗೆ ಹೆಮ್ಮೆಯ ವಿಚಾರ ಎಂದು ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಹೇಳಿದರು.

Advertisement

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನೇತ್ರತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದ್ದರೆ, ಬಿಜೆಪಿ ನೇತ್ರತ್ವದ ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ಭ್ರಷ್ಟಾಚಾರ ನಿಗ್ರಹಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ನೋಟುಬಂದಿ ಕಾರ್ಯಾಚರಣೆಯಿಂದ ಭಾರತದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲ ಶಂಕಾಸ್ಪದ ವ್ಯವಹಾರಗಳು ಮತ್ತು ಠೇವಣಿಗಳನ್ನು ಹುಡುಕಿ ತೆಗೆಯಲು ಸಾಧ್ಯವಾಯಿತು. ತಮ್ಮ ಅಧಿಕಾರದ ಅವಧಿಯಲ್ಲಿ ಹಣ ಲೂಟಿ ಮಾಡಿದ್ದ ಕಾಂಗ್ರೆಸ್ ನಾಯಕರು ಮಾತ್ರ ಇದರಿಂದ ಕಂಗೆಟ್ಟಿದ್ದರು. ದೇಶದ ಜನತೆ ನೋಟುಬಂದಿ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರೆ, ಕಾಂಗ್ರೆಸ್ ಅಧ್ಯಕ್ಷ ಮಾತ್ರ ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಲ್ಲುವ ನಾಟಕ ಮಾಡಿದ್ದರು. ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿ ಹಾಗೂ ತೆರಿಗೆ ಹೇರಿಕೆ ಕಾಯ್ದೆ ಜಾರಿಗೊಳಿಸಿದ್ದು ಮೋದಿ ಸರ್ಕಾರದ ಸಾಧನೆಯಾಗಿದೆ ಎಂದು ಅವರು ತಿಳಿಸಿದರು.

ಮೋದಿ ಸರ್ಕಾರ 3 ಲಕ್ಷ ಶೆಲ್ ಕಂಪೆನಿಗಳ ವಿರುದ್ದ ಕ್ರಮ ಕೈಗೊಂಡಿದೆ. ಕಪ್ಪುಹಣವನ್ನು ವಿವಿಧ ರೂಪಗಳಲ್ಲಿ ರೂಪಿಸುವ ಮತ್ತು ಇಟ್ಟುಕೊಳ್ಳುವ ಪ್ರಮುಖ ಮಾರ್ಗಗಳನ್ನು ತಡೆಯಲು ಬೇನಾಮಿ ಆಸ್ತಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.ಕಳೆದ 4 ವರ್ಷದಲ್ಲಿ 431 ಯೋಜನೆಗಳ ಫಲಾನುಭವಿಗಳಿಗೆ ಒಟ್ಟು 3,65,996 ಕೋಟಿ ರೂ.ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ಸೇವಾ ನೀಡಿಕೆದಾರರಿಂದ ವಿವಿಧ ಸೇವೆ ಮತ್ತು ಉತ್ಪನ್ನಗಳನ್ನು ಸರ್ಕಾರಿ ಇಲಾಖೆಗಳು ಖರೀದಿ ಮಾಡುವುದಕ್ಕಾಗಿ ಜೆಮ್ ಆನ್ಲೈನ್ ವೇದಿಕೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಸದನಾಗಿ ಕಳೆದ ಹತ್ತು ವರ್ಷದಲ್ಲಿ ನಳಿನ್ಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅವರ ಆಸ್ತಿ ವಿವರವನ್ನು ನಾಮಪತ್ರ ಸಲ್ಲಿಕೆ ಸಂದರ್ಭ ಬಹಿರಂಗ ಪಡಿಸಲಾಗಿದ್ದು, ಐದು ವರ್ಷದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಜಿಲ್ಲೆಯ ಪ್ರಜ್ಞಾವಂತ ಜನತೆ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಮತ್ತೆ ಅವರನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ವೇದವ್ಯಾಸ್ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಿಶೋರ್ ರೈ , ಸಂಧ್ಯಾ ವೆಂಕಟೇಶ್ , ಪ್ರಭಾ ಮಾಲಿನಿ , ಆರ್ . ಸಿ . ನಾರಾಯಣ್ , ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next