ಉಳ್ಳಾಲ: ಹರೇಕಳ ಗ್ರಾಮದಲ್ಲಿ ಐದು ಕೋವಿಡ್-19 ಸೋಂಕು ದೃಢವಾದ ಹಿನ್ನಲೆಯಲ್ಲಿ ಸೋಂಕು ಹರಡದಂತೆ ತಡೆಯುವ ಪ್ರಯತ್ನವಾಗಿ ಇಂದಿನಿಂದ ಹರೇಕಳ ಗ್ರಾಮದಲ್ಲಿ ಲಾಕ್‍ಡೌನ್ ಆರಂಭಗೊಂಡಿದ್ದು, ಪೊಲೀಸ್ ಸಹಕಾರವಿಲ್ಲದೆ ಗ್ರಾಮದ ಸರ್ವಧರ್ಮದ ಜನರು, ವಿವಿಧ ಪಕ್ಷಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನಿರ್ಣಯದಂತೆ ಮೊದಲ ದಿನದ ಲಾಕ್‍ಡೌನ್ ಯಶಸ್ವಿಯಾಗಿದೆ.
ಗ್ರಾಮದ ಜನರು ಪಂಚಾಯತ್ ಅಧಿಕಾರಿಗಳು ವಿಶೇಷ ಸಭೆಯಲ್ಲಿ ತೀರ್ಮಾನಿಸಿದಂತೆ ಸೋಮವಾರ ಅಂಗಡಿಗಳು 12 ಗಂಟೆಯವರೆಗೆ ವ್ಯಾಪಾರ ನಡೆಸಿದ್ದು, ಬಸ್ ಸಂಚಾರ ಸೇರಿದಂತೆ ಹೊರಗಿನ ಖಾಸಗಿ ವಾಹನಗಳಿಗೆ ಗ್ರಾಮಕ್ಕೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ದ್ವಿಚಕ್ರ ವಾಹನ ಇರುವವರು ದೈನಂದಿನ ಕೆಲಸಗಳಿಗೆ ತೆರಳಲು ಆವಕಾಶ ನೀಡಿದ್ದು, ಉಳಿದಂತೆ ಗ್ರಾಮಚಾವಡಿ ನ್ಯೂಪಡ್ಪು ಮಾರ್ಗವಾಗಿ ಮಂಗಳೂರಿಗೆ ತೆರಳುವ ಕೋಟಿಪದವು, ಮಿಷನ್ ಕಂಪೌಂಡ್, ತಾಕಟೆ, ಸೇರಿದಂತೆ ಕೊಣಾಜೆ ಗ್ರಾಮದ ಜನರಿಗೆ ಸಂಚರಿಸಲು ಆವಕಾಶ ನೀಡಲಾಗಿದೆ.
ಚೆಕ್ ಪೋಸ್ಟ್ ಗಳಲ್ಲಿ ಗ್ರಾಮದ ವಾರಿಯರ್ಸ್ ತಂಡ : ಅಂಬ್ಲಮೊಗರು ಗ್ರಾಮದಿಂದ ಹರೇಕಳ ಗ್ರಾಮಕ್ಕೆ ಸಂಪರ್ಕಿಸುವ ಎಲಿಯಾರ್ ದೆಬ್ಬೇಲಿ ರಸ್ತೆ, ಕೊಣಾಜೆ ಮತ್ತು ಅಂಬ್ಲಮೊಗರು ಗ್ರಾಮದ ಗಡಿಭಾಗವಾದ ಒಡ್ಡೆದಗುಳಿ ಸಮೀಪದ ಎಸ್‍ಬಿಐ ಬ್ಯಾಂಕ್ ಬಳಿ ಮತ್ತು ಕೊಣಾಜೆ – ಹರೇಕಳ ಗ್ರಾಮ ಸಂಪರ್ಕಿಸುವ ಗ್ರಾಮಚಾವಡಿ ಕೋಟಿಪದವು ಬಳಿ ಮೂರು ಚೆಕ್ ಪೋಸ್ಟ್ ಗಳನ್ನು ರಚಿಸಿದ್ದು, ಇಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತೀ ಚೆಕ್ ಪೋಸ್ಟ್ ನಲ್ಲಿ 10 ಜನರ ತಂಡ ಇಲ್ಲಿ ದಾಟುವ ಜನರ ಉಷ್ಣತಾ ತಪಾಸಣೆ ಮತ್ತು ಹೆಸರನ್ನು ನೋಂದಾಯಿಸುತ್ತಿದ್ದು, ಮಧ್ಯಾಹ್ನದಿಂದ ರಾತ್ರಿ 7 ಗಂಟೆವರೆಗೆ ಎರಡು ಪಾಳಿಯಲ್ಲಿ ಒಟ್ಟು 60 ಮಂದಿ ಗ್ರಾಮದ ಗಡಿ ಕಾಯುವ ಕೆಲಸ ಮಾಡಲಿದ್ದಾರೆ.
ಗ್ರಾಮದ ಜನರೇ ಸೋಂಕು ತಡೆಯವ ನಿಟ್ಟಿನಲ್ಲಿ ಗ್ರಾಮದ ರಕ್ಷಣೆಗೆ ನಿಂತಿರುವುದು ಜಿಲ್ಲೆಯಲ್ಲಿ ಪ್ರಥಮವಾಗಿದೆ. ಅಧ್ಯಕ್ಷೆ ಆನಿತಾ ಡಿ.ಸೋಜಾ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಾತ್ಯಾತೀತ ಜನತಾ ದಳದ ಕ್ಷೇತ್ರಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ ಉಳಿದೊಟ್ಟು, ತಾ, ಪಂ. ಮಾಜಿ ಸದಸ್ಯ ಮುಸ್ತಾಫ ಹರೇಕಳ, ಪಂಚಾಯತ್ ಸದಸ್ಯರಾದ ಬಶೀರ್‍ಉಂಬುದ, ಅಬ್ದುಲ್ ಸತ್ತಾರ್, ಅಬ್ದುಲ್ ಮಜೀದ್, ಮಹಮ್ಮದ್ ಅಶ್ರಫ್ ಆಲಡ್ಕ, ಬದ್ರುದ್ದೀನ್, ಬಶೀರ್ ಎಸ್.ಎಂ. ವಾಮನ್‍ರಾಜ್, ಜಯಂತ್, ಅಬೂಬಕ್ಕಾರ್ ಸಿದ್ಧಿಕ್ ಉಲ್ಲಾಸ್ ನಗರ, ಪಂಚಾಯತ್ ಆಭಿವೃದ್ಧಿ ಅಧಿಕಾರಿ ರೋಹಿತಾಶ್ವ, ಗ್ರಾಮ ಲೆಕ್ಕಿಗ ಗಾಯತ್ರಿ ಆಶಾ ಕಾರ್ಯಕರ್ತೆಯರು ಸಹಕರಿಸಿದ್ದರು. ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಹರೇಕಳ ಗ್ರಾಮಕ್ಕೆ ಭೇಟಿ ನೀಡಿ ಲಾಕ್‍ಡೌನ್ ವ್ಯವಸ್ಥೆಯನ್ನು ಶ್ಲಾಘಿಸಿದರು.
ಮುನ್ನೂರು ಗ್ರಾಮದಲ್ಲಿ ವ್ಯಾಪಾರ ಲಾಕ್‍ಡೌನ್ : ಮುನ್ನೂರು ಗ್ರಾಮ ಪಂಚಾಯತ್‍ನಲ್ಲೂ ಇಂದಿನಿಂದ ಲಾಕ್‍ಡೌನ್ ಆರಂಭಗೊಂಡಿದ್ದು, ಮಧ್ಯಾಹ್ನ ಒಂದು ಗಂಟೆಯಿಂದ ವ್ಯಾಪಾರಸ್ಥರು ಬಂದ್ ಮಾಡಿ ಲಾಕ್‍ಡೌನ್‍ಗೆ ಸಹಕರಿಸಿದರು. ಕುತ್ತಾರು ಜಂಕ್ಷನ್‍ನಲ್ಲಿ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳನ್ನು ಬಂದ್ ಮಾಡಿಲಾಯಿತು. ಕುಂಪಲದಲ್ಲಿ 6 ಗಂಟೆಯ ಬಳಿಕ ವ್ಯಾಪಾರ ಸ್ಥಗಿತವಾಗುತ್ತಿದೆ.