Advertisement

ಪದವಿ, ಉದ್ಯೋಗ, ಪರಿಪೂರ್ಣ ವ್ಯಕ್ತಿತ್ವಕ್ಕೆ ಶಿಕ್ಷಣ ಬುನಾದಿ

08:58 AM Jan 27, 2019 | Team Udayavani |

ಚಿಕ್ಕಬಳ್ಳಾಪುರ: ಕೇವಲ ಪದವಿ ಅಥವಾ ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕಿಂತ ಮನಷ್ಯ ಪರಿಪೂರ್ಣವಾದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣ ತಳಹದಿ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ 2018-19ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಕಾಣಲು ದೂರದೃಷ್ಟಿ ಹೊಂದಿರಬೇಕೆಂದರು.

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಕಾಲೇಜು ಹಂತದ ವಯಸ್ಸು ಪ್ರತಿಯೊಬ್ಬರ ಜೀವನದಲ್ಲಿ ಕೆಟ್ಟ ಅಭ್ಯಾಸಗಳ ಕಡೆಗೆ ಹೆಚ್ಚು ಆಕರ್ಷಿತವಾಗುತ್ತದೆ. ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪಡೆಯುವಾಗ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಕಲಿಕೆ ಸಂದರ್ಭದಲ್ಲಿ ದುಶ್ಚಟಗಳ ಕಡೆಗೆ ಆಕರ್ಷಿತರಾಗದೇ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಭವಿಷ್ಯ ಕೂಡ ಉತ್ತಮವಾಗಿರುತ್ತದೆ ಎಂದರು.

ಪೋಕಷರನ್ನು ಕರೆ ತನ್ನಿ: ಶಾಲಾ, ಕಾಲೇಜು ವಾರ್ಷಿಕೋತ್ಸವಗಳು ಮಕ್ಕಳ ಸೃಜನಶೀಲತೆಯನ್ನು ಪ್ರತಿಬಿಂಬಿಸುವಂತೆ ಇರಬೇಕು. ಆದ್ದರಿಂದ ಕಾಲೇಜು ವಾರ್ಷಿಕೋತ್ಸಗಳು ಸಂತೋಷ ಕೂಟಗಳಾಗಿರುವುದರಿಂದ ಪೋಷಕರನ್ನು ಕರೆ ತಂದರೆ ಮಕ್ಕಳ ಚಟುವಟಿಕೆಗಳನ್ನು ಅಥವಾ ಆಟಪಾಟಗಳನ್ನು ನೋಡಿ ಪೋಷಕರು ಸಂತಸಪಡುತ್ತಾರೆ. ತಂದೆ, ತಾಯಿಗೂ ಮಕ್ಕಳನ್ನು ಯಾವ ರೀತಿ ಬೆಳೆಸಬೇಕೆಂಬುದು ಮನವರಿಕೆ ಆಗುತ್ತದೆ. ಆದ್ದರಿಂದ ವಾರ್ಷಿಕೋತ್ಸವ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಪೋಷಕರನ್ನು ಕರೆ ತರುವಂತೆ ಮಕ್ಕಳಿಗೆ ಸಲಹೆ ನೀಡಿದರು.

ಕಾಲೇಜು ವಿದ್ಯಾರ್ಥಿಗಳಿಂದ ಮೂಡಿ ಬಂದ ಭರತನಾಟ್ಯ, ನೃತ್ಯ ಪ್ರದರ್ಶನ, ಜನಪದ ಗೀತೆ, ಭಾವಗೀತೆಗಳ ಗಾಯನ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಸ್‌.ಮಂಜುನಾಥ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ನಗರಸಭಾ ಸದಸ್ಯರಾದ ಸುಬ್ರಹ್ಮಣ್ಯಚಾರಿ, ಗಜೇಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಕೀಲ ಪ್ರಕಾಶ್‌, ಖಜಾಂಚಿ ಡಾ.ರಾಮು, ನಗರಸಭೆ ಆಯುಕ್ತ ಉಮಾಕಾಂತ್‌, ಕಾಲೇಜು ಉಪನ್ಯಾಸಕರಾದ ಸತೀಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next