ಬೆಂಗಳೂರು: ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೊಂದು ಜೆಡಿಎಸ್ ಶಾಸಕರಿಗೊಂದು ನ್ಯಾಯ ಅನ್ನೋ ರೀತಿ ಸಿಎಂ ನಡೆದುಕೊಳ್ಳುತ್ತಿದ್ದಾರೆಂದು ಸಿದ್ದರಾಮಯ್ಯ ಎದುರು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅಸಮಾಧಾನ ಹೊರ
ಹಾಕಿದ್ದಾರೆ.
ಸೋಮವಾರ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಭೇಟಿ ನೀಡಿ, ಜೆಡಿಎಸ್ ಶಾಸಕರ ಎಲ್ಲ ಕೆಲಸಗಳು ಸುಲಭವಾಗಿ ಆಗುತ್ತವೆ. ಆದರೆ, ಕಾಂಗ್ರೆಸ್ ಶಾಸಕರುಪದೇಪದೆ ಮುಖ್ಯಮಂತ್ರಿ ಬಳಿ ಬೇಡಿಕೊಳ್ಳಬೇಕಾದ ಸ್ಥಿತಿಯಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಜೆಡಿಎಸ್ ನಾಯಕರ ಮಾತುಗಳು ನಡೆಯುತ್ತವೆ. ಶಾಸಕನಾದ ನನ್ನ ಮಾತಿಗೆ ಯಾವುದೇ ಬೆಲೆ ಇಲ್ಲ ಎಂದರು ಎಂದು ಹೇಳಲಾಗಿದೆ.
ಸರ್ಕಾರದ ಮಟ್ಟದಲ್ಲಿ ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ನಿರ್ಲಿಪ್ತರಾಗಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಸುಧಾಕರ್ ಅಸಮಾಧಾನ ವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದು, ಏನೇ ಸಮಸ್ಯೆಇದ್ದರೂ ಕುಳಿತು ಮಾತನಾಡಿ ಬಗೆ ಹರಿಸಿಕೊಳ್ಳೋಣ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ನಮಗೆ ಲೋಕಸಭೆ ಚುನಾವಣೆ ಗೆಲುವು ಮುಖ್ಯವಾಗಿದ್ದು, ಅದಕ್ಕಾಗಿ ಎಲ್ಲರೂ ಸಿದ್ಧರಾಗಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಡಾ.ಸುಧಾಕರ್, ನಮ್ಮ ಜಿಲ್ಲೆಯಲ್ಲಿ ರಾಜಕೀಯವಾಗಿ ಕೆಲವು
ಸಮಸ್ಯೆಗಳಾಗಿವೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದ್ದೇನೆ. ಬಿಜೆಪಿಯವರು ಆಪರೇಷನ್ ಕಮಲ
ಮಾಡುತ್ತಿರುವ ಬಗ್ಗೆ ಗೊತ್ತಿಲ್ಲ. ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಆಪರೇಷನ್ ಮಾಡಿಸಿಕೊಳ್ಳಲು ನಾನು ಪೇಷೆಂಟ್ ಅಲ್ಲ, ನಾನು ನಿಷ್ಠಾವಂತ ಕಾಂಗ್ರೆಸ್ಸಿಗ ಎಂದು ಹೇಳಿದರು.