ಬಾಗಲಕೋಟೆ : ಮಾಜಿ ಸಚಿವೆ, ತೇರದಾಳದ ಮಾಜಿ ಶಾಸಕಿ ಉಮಾಶ್ರೀ ಅವರು ಬೆಂಗಳೂರಿನಲ್ಲಿ ಕುಳಿತು ವಿಡಿಯೋ ಮಾಡ್ಕೊಂಡು ಕಳುಹಿಸುತ್ತಾರೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಕೊರೊನಾ ಕುರಿತು ಸರ್ಕಾರ, ತಮ್ಮ ಕಾರ್ಯ ವೈಖರಿ ಕುರಿತು ಟೀಕೆ ಮಾಡುತ್ತಿದ್ದಾರೆ. ಅವರದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದ ಸಾವು-ನೋವು ಅವರಿಗೆ ಕಾಣುತ್ತಿಲ್ಲವೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಪ್ರಶ್ನಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನ ಸಾಯುತ್ತಿದ್ದಾರೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಮೊದಲು ತಾವು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಕಾಳಜಿ ವಹಿಸಲಿ ಎಂದರು.
ಉಮಾಶ್ರೀ ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಮೊದಲು ಕ್ಷೇತ್ರಕ್ಕೆ ಬರಲಿ. ಅವರು, ಅವರ ಪಕ್ಷದ ಕಾರ್ಯಕರ್ತರು, ನಾನು, ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲರೂ ಕೂಡಿ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡೋಣ. ಜನರ ಸಮಸ್ಯೆಗೆ ಸ್ಪಂದಿಸೋಣ. ಕೇವಲ ಜನರನ್ನು ಎತ್ತಿಕಟ್ಟಿ ಮಾತನಾಡುವುದು ಬಿಡಲಿ ಎಂದು ಹೇಳಿದರು.
ಸಂಸತ್ ಭವನ ನಿರ್ಮಾಣದ ಅಗತ್ಯವೇನಿತ್ತು ಎಂದು ಕಾಂಗ್ರೆಸ್‌ನವರು ಈಗ ಪ್ರಶ್ನಿಸುತ್ತಿದ್ದಾರೆ. ವಾಸ್ತವದಲ್ಲಿ ೨೦೧೨ರಲ್ಲೇ ಸಂಸತ್ ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಅಗ ಕೇವಲ ೩೦ ಸಾವಿರ ಸುತ್ತಳತೆಯ ಜಾಗದಲ್ಲಿ ಭವನ ನಿರ್ಮಾಣಕ್ಕೆ ಸಾವಿರಾರು ಕೋಟಿ ಯೋಜನೆ ರೂಪಿಸಲಾಗಿತ್ತು. ಈಗ ೬೫ ಸಾವಿರ ಸುತ್ತಳತೆಯಲ್ಲಿ ೯ ಸಾವಿರ ಕೋಟಿಯಲ್ಲಿ ನಿರ್ಮಾಣ ಮಾಡಲು ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ನ ಜವಾಹರ ಲಾಲ್ ನೆಹರು ಪ್ರಧಾನಿ ಆಗಿದ್ದಾಗ ಒಂದು ಏಮ್ಸ ಆಸ್ಪತ್ರೆ ನಿರ್ಮಿಸಿದ್ದರು. ಇಂದಿರಾ ಗಾಂಧಿ ಇದ್ದಾಗ ಒಂದೂ ಮಾಡಲಿಲ್ಲ. ಅಟಲ್‌ಬಿಹಾರ ವಾಜಪೇಯಿ ಇದ್ದಾಗ ೬, ಪ್ರಧಾನಿ ಮೋದಿ ಅವರು ೧೪ ಏಮ್ಸ ಘಟಕ ನಿರ್ಮಾಣ ಮಾಡಿದ್ದಾರೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಮೋದಿ ಪ್ರಧಾನಿ ಆಗಿರದಿದ್ದರೆ ದೇಶದ ಅರ್ಧ ಜನ ಸಾಯುತ್ತಿದ್ದರು ಎಂದು ಹೇಳಿದರು.
ರಾಜ್ಯದಲ್ಲಿ ೩೧ ಆಕ್ಸಿಜನ್ ಘಟಕ ನಿರ್ಮಾಣ ಮಾಡಲು ಮಂಜೂರಾತಿ ನೀಡಿದ್ದು, ಬಾಗಲಕೋಟೆಯಲ್ಲಿ ಈ ಘಟಕ ನಿರ್ಮಾಣಗೊಳ್ಳಲಿದೆ. ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಪ್ರಾರಂಭವಾದಾಗ ಇದೇ ಕಾಂಗ್ರೆಸ್‌ನವರು ಟೀಕೆ ಮಾಡಿದರು. ಜನರು ಈ ಲಸಿಕೆ ಪಡೆಯಬೇಡಿ, ಇದು ಮೋದಿ ಲಸಿಕೆ ಅಂದ್ರು. ಈಗ ಲಸಿಕೆಗೆ ಕಾಂಗ್ರೆಸ್‌ನಿಂದ ಎಂಎಲ್‌ಎ ಫಂಡ್ ಕೊಡುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರಿಂದಲೇ ಲಸಿಕೆ ಪಡೆಯುವವರು ಸಂಖ್ಯೆ ಕಡಿಮೆ ಆಯಿತು. ಹೀಗಾಗಿ ಸಾವಿರಾರು ಜನ ಲಸಿಕೆ ಪಡೆಯಬೇಲಿಲ್ಲ. ಇದುವೇ ಹಲವರ ಸಾವಿಗೂ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್‌ನವರ ಮೇಲೆ ದೂರು ದಾಖಲಿಸಬೇಕು ಎಂದರು.