ಆನೇಕಲ್: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ರಾತ್ರಿಯೇ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ಭಾನುವಾರ ಮಧ್ಯರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂರು ಕಾರುಗಳು ಚಂದಾಪುರದ ಬಳಿಯಿರುವ ಸೂರ್ಯಸಿಟಿಯ ಆನೇಕಲ್ ಶಾಸಕ ಬಿ.ಶಿವಣ್ಣನವರ ಮನೆ ಮುಂದೆ ದಾಳಿಗಾಗಿ ಸಿದ್ಧವಾಗಿದ್ದವು. ನಾಲ್ಕು ಜನ ಅಧಿಕಾರಿಗಳ ತಂಡ ಮಧ್ಯರಾತ್ರಿಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಿರಂತರವಾಗಿ ಶೋಧ ನಡೆಸಿ ಒಂದು ಸೂಟ್‌ಕೇಸ್‌ನೊಂದಿಗೆ ತೆರಳಿದ್ದಾರೆ.
ಅಧಿಕಾರಿಗಳು ಶಾಸಕರ ಮನೆ ಜಾಲಾಡುತ್ತಿದ್ದಂತೆ ಸುದ್ದಿ ಕಾಡ್ಗಿಚ್ಚಿನಂತೆ ತಾಲೂಕಿನಾದ್ಯಂಥ ಹಬ್ಬಿತು. ಸಾವಿರಾರು ಸಂಖ್ಯೆಯಲ್ಲಿನ ಕಾರ್ಯಕರ್ತರು ಶಾಸಕ ಶಿವಣ್ಣ ಅವರ ಮನೆ ಮುಂದೆ ಜಮಾಯಿಸಿದರು. ಕಾರ್ಯಕರ್ತರು ಆಗಮಿಸುತ್ತಿದ್ದಂತೆ ಪೊಲೀಸರು ಸರ್ಪಗಾವಲು ಹಾಕಿ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮತ್ತು ಆನೇಕಲ್ ಮಾಜಿ ಸಚಿವ ಎ.ನಾರಾಯಣಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದಂತೆ ಶಾಸಕ ಬಿ.ಶಿವಣ್ಣ ಮನೆಯಿಂದ ಹೊರ ಬಂದು ಘೋಷಣೆಗಳನ್ನು ಹಾಕದಂತೆ ಮನವಿ ಮಾಡಿದರು. ಆದರೆ ಕಾರ್ಯಕರ್ತರು ಮಾತ್ರ ಸಮಾಧಾನವಾಗದೇ ಘೋಷಣೆಗಳನ್ನು ಹಾಕುತ್ತಲೇ ಇದ್ದರು.
ಸುಮಾರು ಆರು ಗಂಟೆಗಳ ಸತತವಾಗಿ ದಾಖಲಾತಿಗಳನ್ನು ಮತ್ತು ಮನೆಯಲ್ಲಿ ಶಾಸಕರ ಮೊಬೈಲ್, ಸಿಸಿಟೀವಿ ಕ್ಯಾಮೆರಾ ಹಾರ್ಡ್ ಡಿಸ್ಕ್ ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಸುಮಾರು ಮಧ್ಯಾಹ್ನ 12ಗಂಟೆಗೆ ಶಾಸಕ ಬಿ.ಶಿವಣ್ಣನವರ ಮನೆಯಿಂದ ಅಧಿಕಾರಿಗಳು ಹೊರ ನಡೆಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಶಿವಣ್ಣನವರ ಪರ ಘೋಷಣೆಗಳನ್ನು ಹಾಕಿ ಸಂಭ್ರಮಿಸಿದರು. ಶಿವಣ್ಣನವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ, ಮತ್ತೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಾನಸಿಕವಾಗಿ ಕುಗ್ಗಿಸಲು ತಂತ್ರ: ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ.ಶಿವಣ್ಣ ಇದೊಂದು ರಾಜಕೀಯ ಪ್ರೇರಿತ ದಾಳಿ. ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಈ ರೀತಿ ತಂತ್ರ ಅನುಸರಿಸಿದ್ದಾರೆಂದು ಆರೋಪಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಈ ರೀತಿಯ ಹೆದರಿಸುವ ಕೆಲಸ ಮಾಡಿರಲಿಲ್ಲ. ಆದರೆ ಬಿಜೆಪಿ ಐಟಿ ಅಧಿಕಾರಿಗಳನ್ನು ಮುಂದೆ ಬಿಟ್ಟು ಇಷ್ಟು ದಿನ ನನ್ನ ಮೇಲೆ ತನಿಖೆ ಮಾಡಬಹುದಿತ್ತು. ಚುನಾವಣೆ ಸಮಯಕ್ಕೆ ಇಂತಹ ದಾಳಿ ಮಾಡುವುದು ರಾಜಕೀಯ ಪ್ರೇರಿತವಾಗಿದೆ ಎಂದರು.
ಅಧಿಕಾರಿಗಳು ಕೆಲವೊಂದು ಪ್ರಶ್ನೆಗಳನ್ನು ನನ್ನ ಬಳಿ ಕೇಳಿದ್ದಾರೆ. ಅದಕ್ಕೆಲ್ಲ ಸೂಕ್ತವಾದ ಉತ್ತರ ಕೊಟ್ಟಿದ್ದೇನೆ. ಕೆಲವೊಂದು ದಾಖಲೆಗಳನ್ನು ಅವರು ಪಡೆದುಕೊಂಡಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಚುನಾವಣೆಯಲ್ಲಿ ಜನತೆ ತೀರ್ಮಾನ ಮಾಡುತ್ತಾರೆ. ನೇರವಾಗಿ ಸ್ಪರ್ಧಿಸಬೇಕಾದವರು ಹಿಂಬದಿಯ ರಾಜಕಾರಣ ಮಾಡುವ ಮೂಲಕ ಕೇಂದ್ರ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂದರು.