ಹಾಸನ: ದಾಳಿ ನಡೆಸಿದ ಚಿರತೆಯನ್ನು ಕೊಂದ ಅರಸೀಕೆರೆ ಇಬ್ಬರಿಗೆ ಸರ್ಕಾರ ಶೌರ್ಯ ಪ್ರಶಸ್ತಿ ಕೊಡಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸೋಮವಾರ ಬೆಳಿಗ್ಗೆ ಅರಸೀಕೆರೆ ತಾಲೂಕಿನ ಭೈರಗೊಂಡನಹಳ್ಳಿಯ ಚಂದ್ರಮ್ಮ ಹಾಗೂ ಆಕೆಯ ಮಗ ಕಿರಣ್ ಮೇಲೆ ಚಿರತೆ ದಾಳಿ ನಡೆಸಿದಾಗ ಕಿರಣ್ ಚಿರತೆಯ ಮೇಲೆ ಎರಗಿ ತನ್ನ ತಾಯಿ ಮತ್ತು ತನ್ನನ್ನು ರಕ್ಷಿಸಿಕೊಂಡಿದ್ದ. ಅದೇ ದಿನ ಮಧ್ಯಾಹ್ನ ಬೆಂಡೆಕೆರೆ ಗ್ರಾಮದ ಬಳಿ ರಾಜಗೋಪಾಲ ನಾಯ್ಕ ಎಂಬವರು ತನ್ನ ಪತ್ನಿ ಹಾಗೂ ಮಗಳೊಂದಿಗೆ ಬೈಕ್ ನಲ್ಲಿ ಬರುತ್ತಿದ್ದಾಗ ಚಿರತೆ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಗೋಪಾಲನಾಯ್ಕ ಮತ್ತು ಪತ್ನಿ ಬೈಕ್‌ನಿಂದ ಬಿದ್ದರೂ ಎದೆಗುಂದದೆ ಚಿರತೆಯನ್ನು ಕೈಯಿಂದಲೇ ಹೊಡೆದು ಸಾಹಿತಿಸಿ ಪತ್ನಿ ಮತ್ತು ಮಗಳನ್ನು ರಕ್ಷಿಸಿದ್ದರು ಎಂದು ಹೇಳಿದರು.
ಚಿರತೆಯನ್ನು ಕೊಂದಿದ್ದಕ್ಕೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ಬಂಧಿಸುವ ಭಯದಿಂದ ರಾಜಗೋಪಾಲ ನಾಯ್ಕ ಚಿರತೆಯನ್ನು ಕೊಂದಿದ್ದ ಬಗ್ಗೆ ಹೇಳಿಕೊಂಡಿರಲಿಲ್ಲ.ಆದರೆ, ಆತ್ಮ ರಕ್ಷಣೆ ಮತ್ತು ಕುಟುಂಬ ರಕ್ಷಣೆಗಾಗಿ ಚಿರತೆಯನ್ನು ಸಾಯಿಸಿದ್ದರಿಂದ ಅರಣ್ಯ ಇಲಾಖೆಯಯವರು ಪ್ರಕರಣ ದಾಖಲಿಸುವುದಿಲ್ಲ ಎಂದು ಧೈರ್ಯ ಹೇಳಿದ್ದರಿಂದ ಚಿರತೆಯನ್ನು ಕೊಂದಿದ್ದನ್ನು ದೃಢಪಡಿಸುತ್ತಿದ್ದಾರೆ ಎಂದು ಹೇಳಿದರು.
ಧೈರ್ಯ ತುಂಬುತ್ತೇನೆ: ಚಿರತೆಯೊಂದಿಗೆ ಸೆಣಸಿ ಪ್ರಾಣ ಉಳಿಸಿದ ಕಿರಣ್ ಮತ್ತು ರಾಜಗೋಪಾಲ ನಾಯ್ಕ ಇಬ್ಬರಿಗೂ ಶೌರ್ಯ ಪ್ರಶಸ್ತಿ ಕೊಡಬೇಕು ಎಂದು ಆಗ್ರಹಪಡಿಸಿದ ಶಿವಲಿಂಗೇಗೌಡ ಅವರು, ಸರ್ಕಾರ ಪ್ರಶಸ್ತಿ ಕೊಡಲಿ ಬಿಡಲಿ, ಅರಸೀಕೆರೆಯಲ್ಲಿ ಅವರಿಬ್ಬರನ್ನೂ ಸನ್ಮಾನಿಸಿ ಆ ಮೂಲಕ ತಾಲೂಕಿನ ಜನರಿಗೆ ಧೈರ್ಯ ತುಂಬುತ್ತೇವೆ ಎಂದು ತಿಳಿಸಿದರು.
ಒಂದೂವರೆ ತಿಂಗಳ ಹಿಂದೆ ಗ್ರಾಮವೊಂದಕ್ಕೆ ಭೇಟಿ ನೀಡಿ ನಾನು ವಾಪಸ್ಸಾಗುತ್ತಿದ್ದಾಗ ಕರಡಿಯೊಂದು ನಾಗವೇದಿ ಗ್ರಾಮದ ಬಳಿ ಬೋರ್‌ವೆಲ್ ಬಳಿ ನೀರು ಕುಡಿಯುತ್ತಿತ್ತು. ಅರಸೀಕೆರೆ ತಾಲೂಕಿನ ಹಿರೇಕಲ್ಲು ಗುಡ್ಡ ಅರಣ್ಯದಲ್ಲಿ ಆಹಾರ ಮತ್ತು ನೀರು ಇಲ್ಲದ ಕಾರಣ ವನ್ಯ ಮೃಗಗಳು ಗ್ರಾಮಗಳಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ಕುಡಿಯುವ ನೀರು ಸಿಗುವಂತೆ ಮಾಡಬೇಕಿತ್ತು. ಆದರೆ, ಅರಣ್ಯ ಇಲಾಖೆ ವಿಫಲವಾಗಿದೆ ಎಂದು ದೂರಿದರು.