ಬೀದರ್: ಸಿಎಂ ಯಡಿಯೂರಪ್ಪ ವಿರುದ್ಧ ಬ್ಲ್ಯಾಕ್ ಮೇಲ್ ಮೂಲಕ ಸಚಿವ ಸ್ಥಾನ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಮಸಿ ಬಳೆದ ಘಟನೆಯಾಗಿದ್ದು, ಈ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಸಿಡಿ ಮೂಲಕ ಸಚಿವ ಸ್ಥಾನ ಪಡೆದಿದ್ದಾರೆ ಎಂದು ಆಡಳಿತಾರೂಢ ಪಕ್ಷದ ಹಿರಿಯ ಶಾಸಕರೇ ಆರೋಪ ಮಾಡಿದ್ದಾರೆ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದರು.
ಬ್ಲ್ಯಾಕ್ ಮೆಲ್ ಘಟನೆ ರಾಜಕಾರಣಿಗಳ ಬಗ್ಗೆ ಜನರಿಗೆ ಅಪಹಾಸ್ಯ ಮೂಡುವಂತಾಗಿದೆ. ನೀತಿಗಳ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ಬಗ್ಗು ಬಡೆಯಲು ಪ್ರಯತ್ನಿಸುತ್ತಾರೆ. ಬಿಜೆಪಿಗೆ ನೈತಿಕತೆ ಇದ್ದರೆ, ಈ ಘಟನೆ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಅಮಿತ್ ಶಾ ಆಗಮನಕ್ಕೂ ಮುನ್ನ ಬೆಳಗಾವಿ ಬಿಜೆಪಿಯಲ್ಲಿ ಮೂಲ- ವಲಸಿಗ ವಿವಾದ
ಜ. 20ಕ್ಕೆ ರಾಜಭನಕ್ಕೆ ಮುತ್ತಿಗೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ಕರಾಳ ಕಾಯ್ದೆಯಾಗಿವೆ. ಬಂಡವಾಳ ಶಾಹಿಗಳಿಗೆ ಕೃಷಿ ಕ್ಷೇತ್ರದಲ್ಲಿ ಅನುಕೂಲ ಮಾಡಿಕೊಡುವುದು ಬಿಜೆಪಿ ಸರ್ಕಾರ ಮತ್ತು ಆರ್ ಎಸ್ಎಸ್ ನ ಅಜೆಂಡಾವಾಗಿದೆ. ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಪಕ್ಷ ದೇಶದಾದ್ಯಂತ್ರ ಹೋರಾಟ ರೂಪಿಸಿದ್ದು, ಜ. 20 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ‘ಕಿಸಾನ್ ಅಧಿಕಾರ ದಿವಸ್’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆ. 10ಕ್ಕೆ ಪ್ರೀಡಂ ಪಾರ್ಕ್ ನಿಂದ ರಾಜಭನವರೆಗೆ ರ್ಯಾಲಿ ಮೂಲಕ ತೆರಳಿ ಮುತ್ತಿಗೆ ಮುತ್ತಿಗೆ ಹಾಕಲಾಗುವುದು ಎಂದು ಶರಣಪ್ರಕಾಶ ಪಾಟೀಲ ಹೇಳಿದರು.