Advertisement

ಅನುಪಾತ ಕಡೆಗಣನೆ ಸಲ್ಲ: ಜಾರಕಿಹೊಳಿ

08:50 PM Jul 04, 2021 | Team Udayavani |

ಹುಕ್ಕೇರಿ: ಯಮಕನಮರಡಿ ವಿಧಾನಸಭೆ ಕ್ಷೇತ್ರದ ಸುಮಾರು 20 ಗ್ರಾಪಂಗಳ ಪೈಕಿ ಬಹುತೇಕ ಕಡೆಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರ ಮತ್ತು ಸಾಮಗ್ರಿ ಅನುದಾನ ಅನುಷ್ಠಾನಗೊಳಿಸುವಲ್ಲಿ ಅನುಪಾತವನ್ನು ಕಡೆಗಣಿಸಲಾಗುತ್ತಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ತಾಪಂ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರು ಹಾಗೂ ಸಾಮಗ್ರಿ ಅನುದಾನದ ಅನುಪಾತದಲ್ಲಿ ಯಾವುದೇ ರೀತಿಯ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಮಾನವ ದಿನಗಳ ಸೃಜನೆಯಾಗುತ್ತಿವೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಸಾಮಗ್ರಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದರಿಂದ ಸಾಮಗ್ರಿ ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಿನ್ನಡೆಯಾಗುತ್ತಿದೆ. ಹಾಗಾಗಿ ಬರುವ ದಿನಗಳಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗಗಳನ್ನು ಅನುಸರಿಸಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಹಿರಣ್ಯಕೇಶಿ ನದಿಯಲ್ಲಿ ಸತತ ನಾಲ್ಕು ವರ್ಷ ಹೊಳೆತ್ತುವ ನೆಪದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿದ್ದೀರಿ. ಇದು ನೀರಿನಲ್ಲಿ ಹುಣಸೆ ತೊಳದಂತೆ ವ್ಯರ್ಥವಾಗಿದೆ. ಅದರ ಬದಲಾಗಿ ಗ್ರಾಮದಲ್ಲಿರುವ ಕರೆಗಳು ಹೊಳೆತ್ತುವ ಕೆಲಸ ನಿರ್ವಹಿಸಿದ್ದಲ್ಲಿ ರೈತರು ಹಾಗೂ ಗ್ರಾಮದ ಜನತೆಗೆ ಅನೂಕೂಲ ಮಾಡಬಹುದಾಗಿತ್ತು. ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಅ ಧಿಕಾರಿಗಳು ಹಣ ಖರ್ಚುಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇನ್ಮುಂದೆ ಇಂಥ ಅನರ್ಥವಾಗುವಂತೆ ಕೆಲಸ ಮಾಡಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ತೋಟಪಟ್ಟಿಗಳ ರಸ್ತೆ ನಿರ್ಮಾಣ, ಶಾಲೆ, ಅಂಗನವಾಡಿ ಮತ್ತು ಸ್ಮಶಾನಗಳ ಸುಧಾರಣೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಶಾಲೆಗಳ ಒತ್ತುವರಿ ಜಾಗೆ ತೆರವುಗೊಳಿಸಬೇಕು. ಉದ್ಯೋಗ ಖಾತರಿ ಯೋಜನೆಯು ಆಸ್ತಿಗಳನ್ನು ಸೃಜನೆ ಮಾಡುವ ಮೂಲ ಉದ್ದೇಶ ಹೊಂದಿದೆ. ಆದರೆ, ಕೆಲವು ಕಡೆಗಳಲ್ಲಿ ಕೇವಲ ಬಿಲ್‌ ಬರೆದು ಹಣ ಲಪಟಾಯಿಸುವುದಕ್ಕೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒ ಉಮೇಶ ಸಿದ್ನಾಳ, ತಹಶೀಲ್ದಾರ್‌ ಡಾ.ಡಿ.ಎಚ್‌.ಹೂಗಾರ, ತಾಪಂ ವ್ಯವಸ್ಥಾಪಕ ಆರ್‌.ಎ. ಚಟ್ನಿ, ಮುಖಂಡರಾದ ಕಿರಣ ರಜಪೂತ, ಮಂಜುನಾಥ ಪಾಟೀಲ, ಫಕೀರವ್ವಾ ಹಂಚಿನಮನಿ, ದಸ್ತಗೀರ ಬಸಾಪುರೆ, ಪಪ್ಪುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next