Advertisement
2018ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಕಣಕ್ಕಿಳಿದಿದ್ದ ರವೀಂದ್ರನಾಥ್ ಗೆಲ್ಲುತ್ತಾರೆ ಎಂಬ ಆಸೆ ಸ್ವತಃ ಕಮಲ ಪಾಳಯಕ್ಕೂ ಇರಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿದ್ದ ರವೀಂದ್ರನಾಥ್ ಮನೆ ಮನೆಗೆ ತೆರಳಿ ನಡೆಸಿದ ಅತ್ಯಂತ ವ್ಯವಸ್ಥಿತ ಪ್ರಚಾರ ಅವರನ್ನು ಗೆಲುವಿನ ದಡ ಸೇರಿಸಿತ್ತು. ಕಳೆದ ಚುನಾವಣೆಯಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಕಾಂಗ್ರೆಸ್‌ಗೆ ಸೋಲುಣಿಸಿದ್ದಲ್ಲದೆ ಉತ್ತರ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತಂದು ಕೊಟ್ಟಿದ್ದರು. ಆದರೆ ಈಗ 2023ರ ಚುನಾವಣೆ ರಂಗೇರುತ್ತಿರುವ ಸಂದರ್ಭದಲ್ಲೇ ಅನಾರೋಗ್ಯದ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
Related Articles
ದಾವಣಗೆರೆ ಎಪಿಎಂಸಿಯಲ್ಲಿ ದಲ್ಲಾಳಿ ಅಂಗಡಿ ಇಟ್ಟುಕೊಂಡಿದ್ದ ರವೀಂದ್ರನಾಥ್, ವಿದ್ಯಾರ್ಥಿ ದೆಸೆಯಿಂದಲೇ ಜನಸಂಘದತ್ತ ಒಲವು ಹೊಂದಿದ್ದರು. ಜನಸಂಘದ ಬೆರಳೆಣಿಕೆಯಷ್ಟು ಕಾರ್ಯಕರ್ತರಲ್ಲಿ ಮುಂಚೂಣಿಯಲ್ಲಿದ್ದ ಅವರು 1983ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡರು.
Advertisement
ಬಿಜೆಪಿಯಲ್ಲೇ ಇದ್ದರೆ ಯಾವುದೇ ಕಾರಣಕ್ಕೂ ಉದ್ಧಾರ ಆಗೋಲ್ಲ, ಬರೀ ಬಾವುಟ ಹಿಡಿಯೋಕೆ, ಧ್ವಜ ಕಟ್ಟೋಕೆ ಮಾತ್ರ ಇರಿ¤àಯಾ, ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಿಕೋ’ ಎಂಬ ಮಾತುಗಳನ್ನು ರವೀಂದ್ರನಾಥ್ ಅನೇಕ ಬಾರಿ ಕೇಳಿದ್ದರು. ತಮ್ಮ ನಾಯಕ ಯಡಿಯೂರಪ್ಪ ಅವರೇ ಪಕ್ಷ ತೊರೆದು ಕೆಜೆಪಿ ಕಟ್ಟಿದರೂ ಬಿಜೆಪಿಯಲ್ಲೇ ಮುಂದುವರೆದಿದ್ದು ಅವರ ಪಕ್ಷ ನಿಷ್ಠೆಗೆ ಸಾಕ್ಷಿ.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭೇದ್ಯ ಕೋಟೆಯನ್ನೇ ಹೊಂದಿತ್ತು.ಅಂತಹ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಲು ರವೀಂದ್ರನಾಥ್ ಪ್ರಮುಖರು ಎಂದರೆ ಅತಿಶಯೋಕ್ತಿ ಎನಿಸದು. 1992ರ ಲೋಕಸಭಾ ಚುನಾವಣೆಯಲ್ಲಿ ಚನ್ನಯ್ಯ ಒಡೆಯರ್ ವಿರುದ್ಧ ಸ್ಪ ರ್ಧಿಸಿದ್ದ ರವೀಂದ್ರನಾಥ್, ಕೆಲವೇ ಮತಗಳ ಅಂತರದಲ್ಲಿ ಸೋತರೂ ದಾವಣಗೆರೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿಕೊಟ್ಟಿದ್ದರು. 1994ರ ಮಾಯಕೊಂಡ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರನ್ನು ಸೋಲಿಸಿದ ರವೀಂದ್ರನಾಥ್, ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಮೊಟ್ಟ ಮೊದಲ ಬಿಜೆಪಿ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರದ ಎರಡೂ ಚುನಾವಣೆಯಲ್ಲಿ ಸತತ ಗೆಲುವು ಸಾಧಿ ಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಮೂರು ಚುನಾವಣೆಗಳಲ್ಲಿ ರವೀಂದ್ರನಾಥ್ ಎರಡು ಬಾರಿ ಗೆಲುವು ಸಾಧಿಸಿದ್ದಾರೆ.
ಪರ್ಯಾಯ ಅಭ್ಯರ್ಥಿ ಯಾರು?ದಾವಣಗೆರೆ ಉತ್ತರಾ ಧಿಪತಿ ಸ್ಥಾನಕ್ಕೆ ಸಮರ್ಥ ಪರ್ಯಾಯ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಮುಂದಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಾಜಿ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಜೊತೆಗೆ ಅಚ್ಚರಿ ಎನ್ನುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪುತ್ರ ಜಿ.ಎಸ್.ಅನಿತ್‌ಕುಮಾರ್ ಹೆಸರು ಸಹ ಕೇಳಿ ಬರುತ್ತಿದೆ. ಯಾರಿಗೆ ಟಿಕೆಟ್ ದೊರೆಯಬಹುದು ಎಂಬುದೇ ಕುತೂಹಲ ಮೂಡಿಸಿದೆ. ಇನ್ನು ಎರಡು ದಿನಗಳಲ್ಲಿ ವಿಶೇಷ-ಅಚ್ಚರಿಯ ಬೆಳವಣಿಗೆಯನ್ನು ಕಾಣಬಹುದು ಎಂದು ಸ್ವತಃ ರವೀಂದ್ರನಾಥ್ ಹೇಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. -ರಾ. ರವಿಬಾಬು