ಅಂಕೋಲಾ: ಇಲ್ಲಿಯ ಪುರಸಭೆ ಸ್ಥಾಯಿ ಸಮಿತಿ ಆಯ್ಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೈಡ್ರಾಮಾ ನಡೆದರು ಯಾವುದೇ ಸಫಲವಾಗದೆ ಕೊನೆಗೆ ಕಾಂಗ್ರೆಸ್‌ನ 5 ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಬಿಜೆಪಿಯ ಜಯಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿ ರೋಚಕ ತೀರುವು ಕೊಟ್ಟಂತಾಗಿದೆ.
ಪ್ರಸ್ತುತ ಅಂಕೋಲಾ ಪುರಸಭೆ 23 ಸದಸ್ಯರನ್ನು ಹೊಂದಿದೆ. ಬಿಜೆಪಿಯು 10 ಸದಸ್ಯರೊಂದಿಗೆ ಕಾಂಗ್ರೆಸ್ಸಿನ 5 ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ಬೆಂಬಲ ಸೂಚಿಸಿದರು. ಕಾಂಗ್ರೆಸ್ಸಿನ 5 ಸದಸ್ಯರು ಸಭೆಯಿಂದ ನಿರ್ಗಮಿಸಿದ್ದರಿಂದ ಬಿಜೆಪಿಯ 4 ಹಾಗೂ ಕಾಂಗ್ರೆಸ್ಸಿನ ಒಬ್ಬರು ಒಟ್ಟು 5 ಸದಸ್ಯರ ಪ್ರತಿನಿಧಿತ್ವದ ಸ್ಥಾಯಿ ಸಮಿತಿ ರಚನೆ ಮಾಡಲಾಯಿತು. ಪುರಸಭಾಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಹಾಗೂ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.
ಸ್ಥಾಯಿ ಸಮಿತಿ ರಚನೆ ಕುರಿತ ಕೆಲವು ದಿನಗಳ ಹಿಂದೆ ತೀವ್ರ ಗೊಂದಲದ ವಾತಾವರಣ ಸೃಷ್ಠಿಯಾಗಿ ಬಿಜೆಪಿ ಕಾಂಗ್ರೆಸ್ ನಡುವೆ ಕೋಲಾಹಲವೆದ್ದಿತ್ತು. ಆರೋಪ ಪ್ರತ್ಯಾರೋಪಗಳಿಂದಾಗಿ ಅಸಿಸ್ಟಂಟ್ ಕಮೀಶನರ್ ಅಜಿತ್ ಎಂ ಹಾಗೂ ತಹಶೀಲ್ದಾರ್ ಉದಯ ಕುಂಬಾರ ಮತ್ತು ಶಾಸಕಿ ರೂಪಾಲಿ ನಾಯ್ಕ ಮಧ್ಯಸ್ಥಿಕೆಯಲ್ಲಿ ಸಭೆ ಕೂಡ ನಡೆದಿತ್ತು. ಬಿಜೆಪಿಗೆ ಬೆಂಬಲಿಸಿದ ಪಕ್ಷೇತರ ಸದಸ್ಯರೊಬ್ಬರು ಸ್ಥಾಯಿ ಸಮಿತಿ ರಚಿಸುವಾಗ ಕೊನೆ ಕ್ಷಣದಲ್ಲಿ ಕಾಂಗ್ರೆಸ್ಸಿನ ಕಡೆ ವಾಲಿದ್ದರ ಪರಿಣಾಮ ಬಲಾಬಲದ ಕಾರಣ ನೀಡಿ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿ ಅಹೋರಾತ್ರಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಇಂದಿನ ಸಭೆಯಲ್ಲಿ ಕಾಂಗ್ರೆಸ್ಸಿನ 5 ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯರು ಬೆಂಬಲಿಸುವುದರೊಂದಿಗೆ ಇಡೀ ಪ್ರಕರಣ ಸುಖಾಂತ್ಯ ಕಂಡಿದೆ.
ಶಾಸಕಿ ಅಭಿನಂದನೆ: ಆಯ್ಕೆಯ ಬಳಿಕ ಶಾಸಕಿ ರೂಪಾಲಿ ನಾಯ್ಕ ಆಗಮಿಸಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ ಜಯಾ ನಾಯ್ಕರಿಗೆ ಅಭಿನಂದಿಸಿದರು. ಮತ್ತು ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗು ಅಭಿನಂದಿಸಿದರು. ನಂತರ ಮಾತನಾಡಿ ಮುಂದಿನ ದಿನದಲ್ಲಿ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಪುರಸಭೆ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಕೈ ಜೋಡಿಸೋಣ. ಅಂಕೋಲಾ ಪುರಸಭೆ ಈ ರಾಜ್ಯದಲ್ಲಿ ಮಾದರಿಯಾಗಿಸೋಣ ಎಂದು ಹೇಳಿದರು.