ಕಕ್ಕೇರಾ: ಹತ್ತು ಮೀಟರ್ ತೆರವುಗೊಳಿಸಬೇಕಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹದ್ದು ಮೀರಿ 12 ಮೀಟರ್‌ವರೆಗೂ ಅಂಗಡಿಗಳ ತೆರವು ಗೊಳಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಶಾಸಕ
ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣಕ್ಕೆ ಭೇಟಿ ಅಂಗಡಿಗಳ ತೆರವುಗೊಳಿಸಿದ್ದ ಸ್ಥಳಗಳ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗಡಿಗಳ ತೆರವುಗೊಳಿಸಿದ್ದರಿಂದ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗಿದೆ. ಸೌಜನ್ಯಕ್ಕಾದರೂ ಕಾಲಾವಕಾಶ ಅಧಿಕಾರಿಗಳು ನೀಡಬೇಕಿತ್ತು ಎಂದು ಹರಿಹಾಯ್ದರು.
ಅನೇಕ ದಿನಗಳಿಂದ ಬಹುತೇಕ ವ್ಯಾಪರಸ್ಥರು ಬೀದಿಗೆ ಬರುವಂತೆ ಮಾಡಿದೆ. ಇನ್ನೂ ಅನೇಕರು ಬೀದಿಯಲ್ಲಿ ಮಳೆ-ಚಳಿ ಎನ್ನದೆ ನಿಂತುಕೊಂಡೆ ಕಷ್ಟದ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಯಮ ಮೀರಿ ಅಂಗಡಿಗಳ ತೆರವುಗೊಳಿಸಲಾಗಿದ್ದು, ಕೋಟ್ಯಂತರ ನಷ್ಟವಾಗಿದೆ ಎಂದು ವರ್ತಕರು ಅಳಲು
ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮೇಲಾಧಿಕಾರಿಗಳು ಕಣ್ಮುಚ್ಚಿದ್ದಾರೆ. ಈ ಬಗ್ಗೆ ಗಮನಹರಿಸಿ ವರ್ತಕರಿಗೆ ನ್ಯಾಯ ಒದಗಿಸಿ ಪರಿಹಾರ ನೀಡಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ತಾತಾ, ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ಪುರಸಭೆ ಸದಸ್ಯ ಭೀಮನಗೌಡ ಹಳ್ಳಿ ಸೇರಿದಂತೆ ವಿವಿಧ ಮುಖಂಡರು ಇದ್ದರು.
ಪಟ್ಟಣಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡ ಎದುರು ಬಹುತೇಕ ವ್ಯಾಪಾರಸ್ಥರು ಅಳಲು ತೋಡಿಕೊಂಡು, ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಕಳೆಯುತ್ತಿದ್ದೇವು. ಸದ್ಯ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. 40 ವರ್ಷಗಳಿಂದಲೂ ತೆರೆಗೆ ಪಾವತಿಸಿದ್ದೇವೆ. ವ್ಯಾಪಾರ ಬಿಟ್ಟರೆ ಬೇರೆ ಗತಿ ಇಲ್ಲ. ಉಳಿದ ಜಾಗದಲ್ಲಿಯೇ ಅಂಗಡಿಗಳ ನಡೆಸಲು ತಾವು ಪರವಾನಗಿ ಕೊಡಿಸಬೇಕು ಎಂದು ಸಾಮೂಹಿಕ ವರ್ತಕರು ಸೇರಿ ಶಾಸಕರಲ್ಲಿ ಮನವಿ ಮಾಡಿದರು. ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಎರಡು-ಮೂರು ದಿನಗಳಲ್ಲಿ ಮೇಲಧಿ ಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.