ಕಲಬುರಗಿ: ಅಲ್ಪಸಂಖ್ಯಾತ ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ವಿಫಲವಾಗಿರುವ ಪಾಕಿಸ್ತಾನದ ಮಾನವನ್ನು ಪ್ರಧಾನಿ ಮೋದಿ ಸರ್ಕಾರ ಪೌರತ್ವ ಕಾಯ್ದೆ ಜಾರಿ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹರಾಜು ಹಾಕಲು ಹೊರಟ್ಟಿತ್ತು. ಆದರೆ ಕಾಂಗ್ರೆಸ್ ಕಾಯ್ದೆಯನ್ನು ವಿರೋಧಿಸುವ ಮೂಲಕ ಪಾಕ್ ಮಾನವನ್ನು ಉಳಿಸುತ್ತಿದೆ ಎಂದು ಕುಡಚಿ ಶಾಸಕ ಪಿ.ರಾಜೀವ್ ದೂರಿದರು.
ನಗರದಲ್ಲಿ ಮಾತನಾಡಿದ ಅವರು, ಭಾರತ – ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ನಾಗರಿಕರನ್ನು ರಕ್ಷಣೆ ಮಾಡುವ ಸಂಬಂಧ ನೆಹರೂ ಮತ್ತು ನಿಯಾಕತ್ ಅಲಿ ಒಪ್ಪಂದ ಆಗಿತ್ತು. ಅಲ್ಲಿನ ಅಲ್ಪಸಂಖ್ಯಾತ ನಾಗರಿಕರಿಗೆ ರಕ್ಷಣೆ ನೀಡುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಅಲ್ಲದೇ ವಿಶ್ವ ಸಂಸ್ಥೆ ನಿಮಯವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ. ಇದನ್ನು ಜಗತ್ತಿನ ಮುಂದಿಡಲು ಮೋದಿ ಸರ್ಕಾರ ಹೊರಟಿದೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ಇರುವ ಮುಸ್ಲಿಮರಿಗೆ ಯಾವುದೇ ಅಪಾಯವಿಲ್ಲ. ಪೌರತ್ವ ಕಾಯ್ದೆಯನ್ನು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪ್ರತಿಪಾದನೆ ಮಾಡಿದ್ದರು. ಈಗಿನ ಕಾಯ್ದೆಯಲ್ಲಿ ಯಾರ ಪೌರತ್ವ ಕಿತ್ತುಕೊಳ್ಳುವ ಅಂಶವಿಲ್ಲ. ಇದು ಮುಸ್ಲಿಮರಿಗೂ ಗೊತ್ತಿದೆ. ಆದರೆ ಕಾಂಗ್ರೆಸ್ ಪ್ರಚೋದನೆಗೆ ಒಳಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಕುತಂತ್ರದ ಮುಂದೆ ಬಿಜೆಪಿ ಸೋತಿದೆ ಎಂದು ಹೇಳಿದರು.
ಪೌರತ್ವ ಕಾಯ್ದೆ ಯಾಕೆ ಹಿಂಪಡೆಯಬೇಕು ಎಂಬ ಕಾರಣವನ್ನು ಮುಖಂಡರು ನೀಡುತ್ತಿಲ್ಲ. ಇದನ್ನು ಅವರ ಮನವಿ ಪತ್ರಗಳನ್ನು ನೋಡಿದರೆ ಗೊತ್ತಾಗುತ್ತದೆ. ಆದ್ದರಿಂದ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಪ್ರತೀ ಮನೆ ಮನೆಗೆ ಬಿಜೆಪಿ ಹೋಗಲಿದೆ ಎಂದರು.