Advertisement

ದತ್ತು ಶಾಲೆಗೆ ಶಾಸಕರ ನಿರಾಸಕ್ತಿ

06:27 PM Dec 21, 2020 | Suhan S |

ದಾವಣಗೆರೆ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ವಿಧಾನಸಭೆ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಸರ್ಕಾರವೇನೋ ಆದೇಶಿಸಿದೆ. ಆದರೆ ಬಹುತೇಕ ಶಾಸಕರು ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಲು ಮನಸ್ಸು ಮಾಡದೇ ಇರುವುದು ಬಹಿರಂಗಗೊಂಡಿದೆ.

Advertisement

ಜಿಲ್ಲೆಯ ಎಲ್ಲ ಆರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಜಿಲ್ಲೆಯಲ್ಲದತ್ತು ತೆಗೆದುಕೊಂಡ 12 ಶಾಲೆಗಳ ಮೂಲಸೌಕರ್ಯಅಭಿವೃದ್ಧಿಗೆ ಕೇವಲ 3.32 ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದಾರೆ.ಜಿಲ್ಲೆಯ ಶಾಸಕರಲ್ಲಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಕ್ಷೇತ್ರ ವ್ಯಾಪ್ತಿಯ ಮೂರು ಶಾಲೆಗಳಿಗೆ ಅತಿ ಹೆಚ್ಚು ಅಂದರೆ 88 ಲಕ್ಷ ರೂ. ನೀಡಲು ಒಪ್ಪಿಗೆ ನೀಡಿದ್ದಾರೆ. ಹೊನ್ನಾಳಿ ಶಾಸಕ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅತಿಕಡಿಮೆ ಎಂದರೆ ಕೇವಲ 14.5ಲಕ್ಷ ರೂ. ನೀಡಲು ಒಪ್ಪಿದ್ದಾರೆ.

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ವಿಧಾನಸಭೆ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳಲು ಸರ್ಕಾರ ಆದೇಶಹೊರಡಿಸಿದ ಬಳಿಕ ಜಿಲ್ಲೆಯ ಯಾವ ಶಾಸಕರೂ ಶಾಲೆ ಅಭಿವೃದ್ಧಿ, ಅನುದಾನ ನೀಡಿಕೆ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರೊಂದಿಗೆ ಒಂದು ಸಭೆಯನ್ನೂ ಮಾಡಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಶಾಸಕರನ್ನು ಸಂಪರ್ಕಿಸಿ ತಾವು ಗುರುತಿಸಿದ ಮೂರು ದತ್ತು ಶಾಲೆಗಳಿಗೆ ಅಂದಾಜು ವೆಚ್ಚ ತಿಳಿಸಿ, ಅನುದಾನಕ್ಕೆ ಒಪ್ಪಿಗೆ ಪತ್ರ ಪಡೆದುಕೊಂಡಿದ್ದಾರೆ.

ಎಷ್ಟು ಅನುದಾನಕ್ಕೆ ಒಪ್ಪಿಗೆ?: ದತ್ತು ಪಡೆದ ಮೂರು ಶಾಲೆಗಳಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ 35 ಲಕ್ಷ ರೂ., ಹರಿಹರ ಶಾಸಕ ಎಸ್‌. ರಾಮಪ್ಪ 15 ಲಕ್ಷ ರೂ., ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ 14.50 ಲಕ್ಷ ರೂ., ಜಗಳೂರು ಶಾಸಕ 45 ಲಕ್ಷ ರೂ., ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ 88 ಲಕ್ಷ ರೂ., ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ| ಲಿಂಗಣ್ಣ 60 ಲಕ್ಷ ರೂ., ದಾವಣಗೆರೆ ಉತ್ತರ ಕ್ಷೇತ್ರದ ಎಸ್‌.ಎ. ರವೀಂದ್ರನಾಥ್‌ 75 ಲಕ್ಷ ರೂ. ಅನುದಾನ ನೀಡಲು ಒಪ್ಪಿದ್ದಾರೆ.

ದತ್ತು ಶಾಲಾವಾರು ಅನುದಾನ

Advertisement

ಚನ್ನಗಿರಿ ಕ್ಷೇತ್ರ: ಚನ್ನೇಶ್ವರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 27ಲಕ್ಷ ರೂ., ಎ.ಕೆ. ಕಾಲೋನಿ ಸ.ಹಿ.ಪ್ರಾ ಶಾಲೆಗೆ 11ಲಕ್ಷ ರೂ., ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ 50 ಲಕ್ಷ ರೂ. ಒಟ್ಟು 88 ಲಕ್ಷ ರೂ.

ಮಾಯಕೊಂಡ ಕ್ಷೇತ್ರ: ತ್ಯಾವಣಿಗೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ 20 ಲಕ್ಷ ರೂ., ಮೆಳ್ಳೆಕಟ್ಟೆ ಸಹಿಪ್ರಾ ಶಾಲೆ 20 ಲಕ್ಷ ರೂ., ಆನಗೋಡು ಸಕಿಪ್ರಾ ಶಾಲೆಗೆ 20 ಲಕ್ಷ ರೂ. ಒಟ್ಟು 60 ಲಕ್ಷ ರೂ.

ದಾವಣಗೆರೆ ಉತ್ತರ ಕ್ಷೇತ್ರ: ನಿಟುವಳ್ಳಿಯ ಸರ್ಕಾರಿ ಉನ್ನತೀಕರಿಸಿದ ಸಹಿಪ್ರಾ ಶಾಲೆ ಮತ್ತು ಪ್ರೌಢಶಾಲೆಗೆ 25 ಲಕ್ಷ ರೂ.,ಕಕ್ಕರಗೊಳ್ಳ ಸಹಿಪ್ರಾ ಶಾಲೆಗೆ 25 ಲಕ್ಷ ರೂ. ಹಾಗೂ ದೊಡ್ಡಬಾತಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ 25 ಲಕ್ಷ ರೂ. ಒಟ್ಟು 75 ಲಕ್ಷ ರೂ.

ದಾವಣಗೆರೆ ದಕ್ಷಿಣ ಕ್ಷೇತ್ರ: ಕುಕ್ಕವಾಡ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ 8ಲಕ್ಷ ರೂ., ಬೆಳವನೂರು ಕುವೆಂಪು ಸಹಿಪ್ರಾ ಶಾಲೆಗೆ 12 ಲಕ್ಷ ರೂ., ಸಹಿಪ್ರಾ ಶಾಲೆ ಹಳೆಮಾಧ್ಯಮಿಕ ಶಾಲೆಗೆ 15 ಲಕ್ಷ ರೂ. ಒಟ್ಟು 35 ಲಕ್ಷ ರೂ.

ಹರಿಹರ ಕ್ಷೇತ್ರ: ಬನ್ನಿಕೋಡು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ ಐದು ಲಕ್ಷ ರೂ.,ಹಾಲಿವಾಣ ಸಹಿಪ್ರಾ ಶಾಲೆಗೆ ಐದು ಲಕ್ಷರೂ., ನಿಟ್ಟೂರು ಸಹಿಪ್ರಾ ಶಾಲೆಗೆ ಐದು ಲಕ್ಷ ರೂ. ಸೇರಿ ಒಟ್ಟು 15 ಲಕ್ಷ ರೂ.

ಹೊನ್ನಾಳಿ ಕ್ಷೇತ್ರ: ನ್ಯಾಮತಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ 3.5 ಲಕ್ಷ ರೂ., ಕೂಲಂಬಿ ಸಹಿಪ್ರಾ ಶಾಲೆಗೆ 4.5 ಲಕ್ಷ ರೂ., ಕುಂದೂರು ಸಹಿಪ್ರಾ ಶಾಲೆಗೆ 6.5 ಲಕ್ಷ ರೂ. ಒಟ್ಟು 14.5 ಲಕ್ಷ ರೂ.

ಜಗಳೂರು ಕ್ಷೇತ್ರ: ಮುಸ್ಟೂರು ಸಹಿಪ್ರಾ ಶಾಲೆಗೆ 15 ಲಕ್ಷ ರೂ., ಪಲ್ಲಾಗಟ್ಟೆ ಸಹಿಪ್ರಾ ಶಾಲೆಗೆ 15ಲಕ್ಷ ರೂ., ಕ್ಯಾಸೆನಹಳ್ಳಿ ಸಹಿಪ್ರಾ ಶಾಲೆಗೆ 15ಲಕ್ಷ ರೂ. ಸೇರಿ ಒಟ್ಟು 45ಲಕ್ಷ ರೂ.

ಒಟ್ಟಾರೆ ದತ್ತು ಪಡೆದ ಸರ್ಕಾರಿ ಶಾಲೆಗಳಿಗೆ ಒಂದಿಷ್ಟು ಅನುದಾನ ನೀಡಲು ಜಿಲ್ಲೆಯ ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ. ಈ ಅನುದಾನ ಶೀಘ್ರ ಬಿಡುಗಡೆಯಾಗಿ ಶಾಲೆಗಳು ಪುನಾರಂಭವಾಗುವುದರೊಳಗೆ ಅಭಿವೃದ್ಧಿಯಾಗಬೇಕು ಎಂಬುದು ನಾಗರಿಕರ ಅಪೇಕ್ಷೆ

ಜಿಲ್ಲೆಯ ಶಾಸಕರಲ್ಲಿ ಐವರು ದತ್ತು ಶಾಲೆಗಳಿಗೆ ಅನುದಾನನೀಡಲು ಒಪ್ಪಿಗೆ ನೀಡಿದ್ದಾರೆ.ಅನುದಾನ ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅನುದಾನ ಬಂದ ಬಳಿಕಶಾಸಕರೊಂದಿಗೆ ದತ್ತು ಶಾಲೆಗಳಲ್ಲಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆಇನ್ನಷ್ಟು ಚರ್ಚೆ ಮಾಡಲಾಗುವುದು.  –ಪಿ.ಆರ್‌. ಪರಮೇಶ್ವರಪ್ಪ, ಡಿಡಿಪಿಐ, ದಾವಣಗೆರೆ

ಸರ್ಕಾರ ಆದೇಶ ಮಾಡಿದ್ದರಿಂದ ಮೂರು ಶಾಲೆ ದತ್ತು ಪಡೆದು ಒಂದಿಷ್ಟು ಅನುದಾನ ಕೊಟ್ಟರಾಯಿತು ಎಂಬ ನಿರಾಸಕ್ತಿಯ ಭಾವನೆಗಿಂತ ಶಾಸಕರು ದತ್ತು ಶಾಲೆಗೆ ಭೇಟಿ ನೀಡಿ ಅಲ್ಲಿ ಸ್ಥಿತಿಗತಿ ಪರಿಶೀಲಿಸಬೇಕು.ಅಗತ್ಯಕ್ಕೆ ತಕ್ಕಂತೆ ಅನುದಾನ ಕೊಡುವ ಆಸಕ್ತಿ ತೋರಬೇಕು. – ಸಿ. ವೀರಣ್ಣ, ಶಿಕ್ಷಣ ಪ್ರೇಮಿ, ದಾವಣಗೆರೆ

 

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next