Advertisement

ಆತಂಕ ಪರಿಹಾರಕ್ಕೆ ಶಿಕ್ಷಣ ಸಚಿವರಿಗೆ ಶಾಸಕ ನೆಲ್ಲಿಕುನ್ನು ಪತ್ರ

09:45 AM Mar 24, 2018 | Team Udayavani |

ಕಾಸರಗೋಡು: ಕಣ್ಣೂರು ವಿ.ವಿ. ಅಧೀನದಲ್ಲಿ  ಕಾರ್ಯಾಚರಿಸುತ್ತಿರುವ ಚಾಲಾದ ಬಿ.ಎಡ್‌. ಶಿಕ್ಷಣ ಕೇಂದ್ರದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಶಾಸಕ ಎನ್‌.ಎ. ನೆಲ್ಲಿಕುನ್ನು ಶಿಕ್ಷಣ ಸಚಿವ ಪ್ರೊ| ಸಿ. ರವೀಂದ್ರನಾಥ್‌ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಿ.ಎಡ್‌ ಕೇಂದ್ರದಲ್ಲಿ ಹಲವು ಮಂದಿ ಶಿಕ್ಷಣ ಪೂರೈಸಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಈ ಕೇಂದ್ರದಲ್ಲಿ ಖಾಯಂ ಅಧ್ಯಾಪಕರ ನೇಮಕಾತಿ ನಡೆದಿಲ್ಲ. ಕನ್ನಡ, ಮಲಯಾಳಂ ಭಾಷೆಗಳಿಗೆ ಸೂಕ್ತ ಅಧ್ಯಾಪಕರಿಲ್ಲದ ಕಾರಣ ಶಿಕ್ಷಣ ವಿಭಾಗವು ತೊಂದರೆ ಅನುಭವಿಸುತ್ತಿದೆ. ಕಳೆದ ಒಂದು ತಿಂಗಳಿನಲ್ಲಿ ಇಲ್ಲಿನ ಗ್ರಂಥಾಲಯ ಸಿಬಂದಿ, ಗುಮಾಸ್ತರು ಸಹಿತ ವಾಚ್‌ಮನ್‌ ಹುದ್ದೆಯನ್ನು ರದ್ದುಗೊಳಿಸಲಾಗಿದೆ. ಬಿ.ಎಡ್‌. ಕೇಂದ್ರವೂ ನಿಲುಗಡೆಯಾಗುತ್ತಿದೆ ಎಂಬ ಆತಂಕ ಇಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡಿದೆ. ಕಣ್ಣೂರು ವಿ.ವಿ. ಅಧೀನದ ಶಿಕ್ಷಣ ಕೇಂದ್ರದಲ್ಲಿ ಈ ಹಿಂದೆ ಎಂ.ಬಿ.ಎ., ಎಂ.ಎಸ್ಸಿ. ಕೋರ್ಸ್‌ಗಳನ್ನು ರದ್ದುಗೊಳಿಸಲಾಗಿತ್ತು. ಒಟ್ಟು ಏಳು ವಿಭಾಗಗಳನ್ನು ಒಳಗೊಂಡಿದ್ದ ಶಿಕ್ಷಣ ಕೇಂದ್ರದಲ್ಲಿ ಸರಕಾರಿ ಕಾಲೇಜಿನಿಂದ ಬಿ.ಎ. ಕನ್ನಡ, ಬಿ.ಎ. ಮಲಯಾಳ ವಿಭಾಗಗಳಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಅಧ್ಯಾಪಕರ ಶಿಕ್ಷಣ ತರಬೇತಿಗೆ ಆಗಮಿಸುತ್ತಿದ್ದರು. ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ಸೂಕ್ತ ಸಿಬಂದಿ ನೇಮಕದ ಮೂಲಕ ಫಲಪ್ರದಗೊಳಿಸಬೇಕೆಂದು ಶಾಸಕರು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ. 

ಶಿಕ್ಷಣ ಕೇಂದ್ರಕ್ಕೆ ಸೂಕ್ತ ಆವರಣಗೋಡೆ, ಕ್ಯಾಂಟೀನ್‌ ಸೌಲಭ್ಯ ಇಲ್ಲದ ಕೇಂದ್ರದಲ್ಲಿ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಮಾದರಿ ಶಿಕ್ಷಣ ಕೇಂದ್ರವನ್ನಾಗಿಸುವಂತೆ ಮನವಿ ಮಾಡಲಾಗಿದೆ. ಕೇಂದ್ರದ ಹಾಸ್ಟೆಲ್‌ನಲ್ಲಿ 24 ಮಂದಿ ಕೇಂದ್ರೀಯ ವಿ.ವಿ.ಯ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು ಒಟ್ಟು 44 ಮಂದಿ ವಿದ್ಯಾರ್ಥಿಗಳು ತಂಗಿದ್ದಾರೆ. ಅಗತ್ಯ ಸೌಕರ್ಯಗಳನ್ನು ಕೊಡ ಮಾಡುವ ಮೂಲಕ ಶಿಕ್ಷಣ ಕೇಂದ್ರದ ಅಭಿವೃದ್ಧಿಗೆ ಸಹಾಯ ಮಾಡಬೇಕೆಂದು ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next