ದೇವನಹಳ್ಳಿ: ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳಲ್ಲ. ಇಂತಹ ಹೇಳಿಕೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ಶೋಭೆ ತರುವಂತದ್ದಲ್ಲ ಎಂದು ಶಾಸಕಎಲ್.ಎನ್.ನಾರಾಯಣ ಸ್ವಾಮಿ ತಿರುಗೇಟು ನೀಡಿದರು.
ತಾಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿ ಗ್ರಾಪಂ ಚುನಾವಣಾ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಪೊನ್ನಂ ಪೇಟೆ ಅರಣ್ಯ ಮಹಾವಿದ್ಯಾ ಲಯದಲ್ಲಿ ನಡೆದ ಬಿದಿರು ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ಸಿ. ಪಾಟೀಲ್ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂದು ಹೇಳಿಕೆ ನೀಡಿರುವುದು, ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಎಂದರು.
ಸರ್ಕಾರದ ಉನ್ನತ ಸ್ಥಾನದಲ್ಲಿರುವ ಕೃಷಿ ಸಚಿವರು ಇಂತಹ ಹೇಳಿಕೆಗಳನ್ನುನೀಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಬೇಜವಾಬ್ದಾರಿಯ ಹೇಳಿಕೆಯನ್ನು ನೀಡುವುದು ಸಮಂಜಸ ವಲ್ಲ. ಕೂಡಲೇ ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ಸಚಿವ ಸಂಪುಟ ದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಕ್ಷಮೆ ಕೇಳಿ: ರೈತ ಹುಟ್ಟು ಸ್ವಾಭಿಮಾನಿ ಮತ್ತು ಮರ್ಯಾದಸ್ತನಾಗಿದ್ದಾನೆ. ಸಾಲ ಸೋಲಮಾಡಿಕೊಂಡುಕೃಷಿಚಟುವಟಿಕೆ ನಡೆಸು ತ್ತಾರೆ. ಆದರೆ, ಬೆಳೆ ನಷ್ಟ, ಸಾಲಗಾರರ ಸುಳಿಯಲ್ಲಿ ಸಿಲುಕಿ ಮರ್ಯಾದೆಗೆ ಅಂಜಿ ದಿಕ್ಕುತೋಚದಂತಾಗಿ ಆತ್ಮ ಹತ್ಯೆಗೆ ಮುಂದಾಗುತ್ತಾರೆ. ಸರ್ಕಾರ ಕೂಡಲೇ ರೈತರ ಪರವಾಗಿದ್ದರೆ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ, ಏಕೆ ಆತ್ಮಹತ್ಯೆಗೆ ಮುಂದಾಗುತ್ತಾರೆ. ಕೂಡಲೇ ಕೃಷಿಸಚಿವ ಬಿ.ಸಿ. ಪಾಟೀಲ್ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಕೃಷಿ ಸಚಿವರು ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ, ಧೈರ್ಯ ತುಂಬುವ ಕೆಲಸ ಮಾಡಬೇಕೇ ವಿನಃ, ಇಂತಹ ಹೇಳಿಕೆ ನೀಡಿ, ಅನ್ನದಾತರಿಗೆ ಅಪಮಾನ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ರೈತರ ಸಂಕಷ್ಟಗಳನ್ನು ಅರಿತು, 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿ ನೆರವಾಗಿದ್ದರು. ಈಗೀನ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ರೈತ ವಿರೋಧಿ ಕಾನೂನುಗಳನ್ನು ತಂದುಅನ್ಯಾಯ ಮಾಡಲಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಜನಸಾಮಾನ್ಯರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.