ಹುಣಸೂರು: ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ತಾಲೂಕಿನ ಹುಂಡಿಮಾಳದ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಗುರುವಾರ ಸುರಿದ ಭಾರೀ ಮಳೆಗೆ ಎರಡು ಶಾಲಾ ಕೊಠಡಿಗಳಿಗೆ ನೀರು ನುಗ್ಗಿತ್ತು, ಪ್ರಾಥಮಿಕ ಶಾಲೆಯ ಕಾಪೌಂಡ್ ಹಾಗೂ ಮರಗಳು ಬಿದ್ದು ಆತಂಕ ಸೃಷ್ಟಿಸಿತ್ತು. ಶುಕ್ರವಾರ ಶಾಲೆಗೆ ರಜೆ ನೀಡಲಾಗಿತ್ತು. ಇದೇ ರೀತಿ ಸಿಬಿಟಿ ಕಾಲೋನಿ, ತೆಂಕಲಕೊಪ್ಪಲು, ಬಿಳಿಕೆರೆ ಶಾಲಾ ಕಟ್ಟಡಗಳಿಗೂ ಹಾನಿಯಾಗಿತ್ತಲ್ಲದೆ, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು.
ಹೊಸ ಕಟ್ಟಡ ನಿರ್ಮಾಣಕ್ಕೆ ಮನವಿ;ಪರಿಶೀಲನೆ ನಂತರ ಉದಯವಾಣಿಯೊಂದಿಗೆ ಮಾತನಾಡಿದ ಶಾಸಕ ಮಂಜುನಾಥರು ಶಾಲೆಗಳಿಗೆ ಆಗಿರುವ ಹಾನಿ ಹಾಗೂ ತರಗತಿ ನಡೆಸಲಾಗದಿರುವ ಬಗ್ಗೆ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್‌ರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಮಳೆ ಹಾನಿ ಯೋಜನೆಯಡಿ ಹೊಸದಾಗಿ ತಾಲೂಕಿನಲ್ಲಿ ಕೊಠಡಿಗಳಿಗೆ ಹಾನಿಯಾಗಿರುವ ಕಡೆಗಳಲ್ಲಿ ಕಟ್ಟಡ ನಿರ್ಮಿಸಲು ಕೋರಲಾಗಿದೆ. ಮಳೆ ಹಾನಿಯೋಜನೆಯಡಿ ಕೊಠಡಿ ನಿರ್ಮಾಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.
ಬೆಳೆ ಹಾಗೂ ಮನೆಗಳ ಹಾನಿಗೆ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡಿ ಸರಕಾರದ ಪರಿಹಾರವನ್ನು ತ್ವರಿತಗತಿಯಲ್ಲಿ ವಿತರಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆಂದರು.
ಈ ವೇಳೆ ತಹಶೀಲ್ದಾರ್ ಡಾ.ಅಶೋಕ್, ತಾ.ಪಂ.ಇಓ ಗಿರೀಶ್, ಬಿಇಓ ನಾಗರಾಜ್, ಬಿಆರ್‌ಸಿ ಸಂತೋಷ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷೆ ಸುನಂದ, ಗ್ರಾ.ಪಂ.ಪ್ರತಿನಿಧಿಗಳು, ಮುಖಂಡರಾದ ರಂಗಸ್ವಾಮಿ, ಸುರೇಶ್, ಮುಖ್ಯ ಶಿಕ್ಷಕರಾದ ರವಿ, ಸುಭಾಷಿಣಿ ಮತ್ತಿತರಿದ್ದರು.