ಚನ್ನಗಿರಿ: ತಿಪ್ಪಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಗೆರೆಯ ಅನೇಕ ಗ್ರಾಮಸ್ಥರು ಸುಮಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದು, ಇವರಿಗೆ ಹಕ್ಕುಪತ್ರ ನೀಡಿಲ್ಲ. ಯಾವಾಗ ತಮ್ಮನ್ನು ಅರಣ್ಯ ಇಲಾಖೆಯವರು, ಪೊಲೀಸರು ಒಕ್ಕಲೆಬ್ಬಿಸುತ್ತಾರೋ ಎಂಬ ಭಯದಲ್ಲಿ ಜನರು ಇದ್ದಾರೆ. ಇವರಿಗೆ ಹಕ್ಕುಪತ್ರ ನೀಡಿದಲ್ಲಿ ನೆಮ್ಮದಿಯಿಂದ ಬದುಕುತ್ತಾರೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಗ್ರಾಮಸ್ಥರ ಪರವಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಶನಿವಾರ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ “ಗ್ರಾಮ ವಾಸ್ತವ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಒಟ್ಟು 149 ಜನರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಇದು ಗೋಮಾಳವಾಗಿದ್ದು ಅರಣ್ಯ ಇಲಾಖೆಯವರು ಇಲ್ಲಿ ಅಕೇಶಿಯಾ ಇನ್ನಿತರೆ ಗಿಡ ಮರ ಬೆಳೆದು ತಮ್ಮ ಇಲಾಖೆಗೆ ಸೇರಿಸಿಕೊಂಡಿದ್ದು ಹಕ್ಕುಪತ್ರ ನೀಡಲು ಕೇಂದ್ರದ ನೀತಿಯನ್ವಯ ದಾಖಲಾತಿಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೇಳುತ್ತಿದ್ದಾರೆ ಎಂದರು. ಈ ಭಾಗದಲ್ಲಿ ಸುಮಾರು 68 ಜನರು ಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದಾರೆ.
ಈ ಮನೆಗಳು ಕೂಡ ಅರಣ್ಯ ವ್ಯಾಪ್ತಿಯಲ್ಲಿ ಬರಲಿವೆ ಎಂಬ ಕಾರಣಕ್ಕೆ ಈ ಮನೆಗಳಿಗೆ ಇದುವರೆಗೆ ಖಾತೆ ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಇದನ್ನು ಡಿನೋಟಿಫೈ ಮಾಡುವ ಅಧಿಕಾರವಿದ್ದು, ಹಿರಿಯರ ದಾಖಲೆಗಳನ್ನು ಕೇಳಿಕೊಂಡು ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿ ಇವರಿಗೆ ಇ-ಸ್ವತ್ತು ಆಗುವಂತೆ ಸಹಕರಿಸಬೇಕು. ಸುಮಾರು 112 ವಯೋಮಾನದ ರಾಮಾನಾಯ್ಕ ಎಂಬ ವಯೋವೃದ್ದರು ಮೊದಲು ಇಲ್ಲಿ ಊರು ಇತ್ತು ಎಂದು ದಾಖಲೆ ನೀಡಿದ್ದಾರೆ. ಇದರ ಆಧಾರದ ಮೇಲೆ ಹಕ್ಕು ಪತ್ರ ನೀಡಬೇಕೆಂದರು.
ಜಿಲ್ಲಾಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಕೆಲಸ ಆಗಬೇಕಿದೆ. ಇಲ್ಲಿನ 68 ಮನೆಗಳಿಗೆ ಸಂಬಂಧಿಸಿದ ಪ್ರಕರಣ ಉಪವಿಭಾಗಾಧಿಕಾರಿಗಳ ಬಳಿ ಇದ್ದು ಈ ಬಗ್ಗೆ ಡಿಸಿಎಫ್ ಹಾಗೂ ಎಸಿಎಫ್‌ರವರಿಗೆ ಸೂಚನೆ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ. ಬಹಳಷ್ಟು ವರ್ಷಗಳ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಿ ಗ್ರಾಮ ವಾಸ್ತವ್ಯ ಕೆಲಸ ಮಾಡುತ್ತಿರುವುದು ವಿಶಿಷ್ಟವಾಗಿದೆ. ಸ್ಮಶಾನ, ಮನೆ, ನಿವೇಶನಕ್ಕಾಗಿ ಅರ್ಜಿಗಳು ಬಂದಿದ್ದು, ಇಲ್ಲಿನ ಶಾಸಕರು ಸಹ ಬೆಂಬಲ ನೀಡಿದ್ದು ಎಲ್ಲ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಜಿಪಂ ಸಿಇಒ ಡಾ| ವಿಜಯಮಹಾಂತೇಶ ದಾನಮ್ಮನವರ್ ಮಾತನಾಡಿ, ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಹಳಷ್ಟು ಸೌಲಭ್ಯಗಳು ಆನ್‌ಲೈನ್ ಆಗಿದ್ದರೂ ಜನರು ತಾಲೂಕು ಮತ್ತು ಜಿಲ್ಲಾಡಳಿತದ ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ. ಜನರು ಅನಾವಶ್ಯಕವಾಗಿ ಕಚೇರಿಗಳಿಗೆ ಅಲೆದಾಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಸರ್ಕಾರ, ಜಿಲ್ಲಾ ಕಾರಿಗಳ ತಂಡವೇ ಗ್ರಾಮಕ್ಕೆ ಬಂದು ಗ್ರಾಮ ವಾಸ್ತವ್ಯದಂತಹ ಉತ್ತಮ ಕಾರ್ಯಕ್ರಮ ತಂದಿದ್ದು, ಇಲ್ಲಿ ಜನರ ಪ್ರಸ್ತಾವಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಶೀಘ್ರ ಪರಿಹಾರ ಮತ್ತು ಅರ್ಹರಿಗೆ ಸೌಲಭ್ಯವನ್ನು ತಕ್ಷಣವೇ ನೀಡಲಾಗುವುದು ಎಂದು ತಿಳಿಸಿದರು.
ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಗೆರೆ, ಲಕ್ಷ್ಮೀಸಾಗರ, ಮಹಾತ್ಮಾಗಾಂಧಿನಗರ, ರಾಜಗೊಂಡನಹಳ್ಳಿ, ಟಿ. ಗೊಲ್ಲರಹಟ್ಟಿ, ದಿಗ್ಗೇನಹಳ್ಳಿ, ರೊಪ್ಪದಹಟ್ಟಿ, ದಂಡಿಗೇನಹಳ್ಳಿಗಳಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡಿದೆ. ಜನರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾವಿನಹೊಳೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಸದಸ್ಯರಾದ ಮಂಜುಳಾ ಟಿ.ವಿ. ರಾಜು, ಯಶೋದಮ್ಮ ಮರುಳಪ್ಪ, ಚನ್ನಗಿರಿ ತಾಪಂ ಅಧ್ಯಕ್ಷೆ ಕವಿತಾ, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.