ಮಧುಗಿರಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಎತ್ತಿನಹೊಳೆ ಕಾಮಗಾರಿಗೆ ಭರಪೂರ 3 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಆದರೆ, ಮಧುಗಿರಿಯ ಜಿಲ್ಲಾ ಕೇಂದ್ರದ ಕನಸು ಕನಸಾಗಿಯೇ ಉಳಿದಿದ್ದು, ಯಾವ ಹೋರಾಟಕ್ಕೂ ಬೆಲೆ ನೀಡಿಲ್ಲ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಉದಯವಾಣಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಅನುದಾನ ಕಂಡ ಯೋಜನೆ ಎತ್ತಿನಹೊಳೆ. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಕೇವಲ 500 ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಕುಂಠಿತವಾಗಿತ್ತು. ಆದರೆ ಈ ಪ್ರಸಕ್ತಸಾಲಿನ ಬಜೆಟ್‌ನಲ್ಲಿ 3 ಸಾವಿರ ಕೋಟಿ ಅನುದಾನ ಒದಗಿಸಿರುವುದು ಸ್ವಾಗತಾರ್ಹ. ಆದರೆ, ಮುಖ್ಯವಾದ ಬೇಡಿಕೆ ಜಿಲ್ಲಾ ಕೇಂದ್ರದ ಮನವಿಯನ್ನು ಸರ್ಕಾರ ಪರಿಗಣಿಸಬೇಕಿತ್ತು. ಸಮಗ್ರ ಅಭಿವೃದ್ಧಿಯಾಗಲು ಹಾಗೂ ಯುವಕರಿಗೆ ಉದ್ಯೋಗ ಸಿಗಲು ಮಧುಗಿರಿ ಜಿಲ್ಲಾ ಕೇಂದ್ರವಾಗಬೇಕು. ಇದಕ್ಕೆ ಸಾಕಷ್ಟು ಹೋರಾಟ ಗಳು ನಡೆದಿದ್ದು, ಸರ್ಕಾರ ಜನಾಭಿಪ್ರಾಯಕ್ಕೆ ಮಣೆ ಹಾಕ ಬೇಕಿತ್ತು ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಾರೆ. ಸಂಕಷ್ಟದಲ್ಲಿರುವ ಉಪವಿಭಾಗವನ್ನು ಯಾರೇ ಜಿಲ್ಲಾ ಕೇಂದ್ರ ಮಾಡಿದರೂ ನಮ್ಮ ಅಭ್ಯಂತರವಿಲ್ಲ. ಆದರೆ ಸರ್ಕಾರ ಉಪವಿಭಾಗದ 4 ತಾಲೂಕಿನ ಜನರ ಆಶಯಗಳಿಗೆ ಬೆಲೆ ನೀಡಿ ಅಡಿಷನಲ್ ಬೇಡಿಕೆಯಾಗಿ ಪರಿಗಣಿಸಿ ಜಿಲ್ಲಾ ಕೇಂದ್ರದ ಹೋರಾಟಕ್ಕೆ ಮನ್ನಣೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ಅನುದಾನ ನೀಡಿರುವುದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುವೆ ಎಂದರು.