ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ವಿಚಾರದಲ್ಲಿ ಸಂಪೂರ್ಣವಾಗಿ ಎಡವಿದ್ದರ ಪರಿಣಾಮ ಇಂದು ದೇಶದಲ್ಲಿ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ. ಅವರನ್ನೇ ನಂಬಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ್ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಲಕ್ಷಾಂತರ ಮನೆಗಳು ಮುರಿದಿವೆ. ಆದರೂ ವಿರೋಧ ಪಕ್ಷದವರಾಗಿ ಸಹಕಾರ ಮಾಡಬೇಕಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಲಂಬಾಣಿ ತಾಂಡಾ ಜನರಿಗೆ ವಿಶೇಷ ಪ್ಯಾಕೇಜ್ ಗೆ ಎಂಎಲ್ ಸಿ ಪ್ರಕಾಶ್ ರಾಠೋಡ್ ಆಗ್ರಹ
ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಅಬ್ಬರ ತಗ್ಗಿದ್ದು, ನಿಯಂತ್ರಣಕ್ಕೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಶತಕದ ಗಡಿ ಮೀರಿದ್ದು, ಅಗತ್ಯ ಔಷಧಿ ಮಾತ್ರ ಸರ್ಕಾರದಿಂದ ಸಿಗುತ್ತಿಲ್ಲ. ಒಬ್ಬ ರೋಗಿಗೆ 40-50 ಔಷಧಿ ಬೇಕಿದ್ದು, ಬಿಎಲ್ ಡಿಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೇ 60 ರೋಗಿಗಳಿದ್ದಾರೆ. ಸರಕಾರ ಕೇವಲ 30 ಔಷಧಿ ನೀಡಿದ್ದು, ಒಬ್ಬ ರೋಗಿಗೂ ಸಾಲದು. ಔಷಧಿ ಕೊರತೆ ಮಧ್ಯೆಯೂ ನಮ್ಮ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತ 18 ರೋಗಿಗಳನ್ನು ಗುಣಪಡಿಸಿ, ಮನೆಗೆ ಕಳಿಸಿದ್ದೇವೆ. ಹೀಗಾಗಿ ಸರ್ಕಾರ ಕನಿಷ್ಟ ಅಗತ್ಯ ಪ್ರಮಾಣದ ಔಷಧಿ ಪೂರೈಕೆಗಾದರೂ ಆದ್ಯತೆ ನೀಡಲಿ ಎಂದು ಆಗ್ರಹಿಸಿದರು.
ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ ಎಂದು ಮನೆಗೆ ಹೋದವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ದೇಶದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಹಾಕಲು ಮೊದಲ ಆದ್ಯತೆ ನೀಡಬೇಕು. ಕರ್ನಾಟಕದ 5 ಕೋಟಿ ಜನರಿಗೆ ಲಸಿಕೆ ಹಾಕಬೇಕು ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.