ದೇವನಹಳ್ಳಿ: ಪಟ್ಟಣದ ತಾಲೂಕು ಆಡಳಿತ ಸೌಧದ 2ನೇ ಮಹಡಿಯಲ್ಲಿರುವ ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆ ಸರ್ಕಾರಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರನ್ನು ಕಚೇರಿಯೊಳಗೆ ಬಂಧಿಸಿದ ಘಟನೆ ನಡೆದಿದೆ.
ಬುಧವಾರ ಸರ್ಕಾರಿ ನೌಕರರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ, ಎಲ್ಲಾ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿಯಲಾಗಿತ್ತು. ಆದರೆ, ಸಬ್ ರಿಜಿಸ್ಟರ್ ಕಚೇ ರಿಗೆ ಶಾಸಕರು ಭೇಟಿ ನೀಡಿದ್ದು, ನೋಂದಣಿ ಮಾಡಿ ಸಲು ಬಂದಿದ್ದಾರೆಂದು ಯಾರೋ ಕಿಡಗೇಡಿಗಳು ಹೊರಗಡೆಯಿಂದ ಬೀಗ ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಶಾಸಕರು ಅಕ್ರಮವಾಗಿ ನೋಂದಣಿ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದರು. ಅಕ್ರಮವಾಗಿ ದಾಖಲೆ ತಿದ್ದಲು ಕಚೇರಿಗೆ ಹೊರಗಿನಿಂದ ಬೀಗ ಹಾಕಿ ಒಳಗೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಲಭ್ಯವಿಲ್ಲದ ಸೇವೆ ಶಾಸಕರಿಗೆ ಹೇಗೆ ಸಿಗುತ್ತದೆ. ಕಾನೂನು ಬಾಹಿರ ಕೃತ್ಯಕ್ಕೆ ಮುಷ್ಕರದ ಸಂದರ್ಭ ಉಪಯೋಗಿಸಿ ಕೊಳ್ಳುತ್ತಿರುವುದು ಅಕ್ಷಮ್ಯ ಎಂದು ಹರಿಹಾಯದ್ದರು.
ಸಾರ್ವಜನಿಕರ ಆಕ್ರೋಶ: ನಂತರ ಶಾಸಕರ ಗನ್ ಮ್ಯಾನ್ ಬೀಗ ತೆರೆಯಲು ಮುಂದಾದಾಗ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು. ಬೀಗ ಹಾಕಿದವರು ಸ್ಥಳಕ್ಕೆ ಬರಬೇಕು. ಶಾಸಕರು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಕಚೇರಿಯ ಬಾಗಿಲಿಗೆ ಬಂದ ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧರ್ಮೇಗೌಡರವರ ನೇತೃತ್ವದ 20ಕ್ಕೂ ಹೆಚ್ಚು ಪೊಲೀಸರ ತಂಡ ಬೀಗ ತೆಗೆಸಿ, ಬಿಗಿ ಭದ್ರತೆಯಲ್ಲಿ ಶಾಸಕರನ್ನು ಹೊರ ಕರೆತರಲಾಯಿತು.
ಹೊರಗಿನಿಂದ ಬೀಗ ಹಾಕಿ ಅಪಪ್ರಚಾರ: ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡದ ಶಾಸಕ ಎಲ್.ಎನ್. ನಾರಾಯಣಸ್ವಾಮಿ ಅವರು, ಸಬ್ ರಿಜಿ ಸ್ಟಾರ್ ವಿಚಾರವಾಗಿ ಸಹಾಯ ಕೇಳಿ ಬಂದಿದ್ದ ಶಿಡ್ಲ ಘಟ್ಟ ಮೂಲಕ ಮಹಿಳೆಯರಿಗೆ ನ್ಯಾಯ ಒದಗಿಸಲು ಕಚೇರಿಗೆ ಬಂದಾಗ, ಯಾರೋ ಕಿಡಗೇಡಿಗಳು ಹೊರಗಿನಿಂದ ಬೀಗ ಹಾಕಿ ಅಪಪ್ರಚಾರ ಮಾಡಿದ್ದಾರೆ. ಯಾವುದೇ ಅಕ್ರಮ ಕೆಲಸದಲ್ಲಿ ಭಾಗಿಯಾಗಿಲ್ಲ. ಎಲ್ಲ ಆರೋಪಗಳು ಸುಳ್ಳು ಎಂದರು.
ಕಳೆದ ಒಂದು ಗಂಟೆಗೂ ಅಧಿಕ ಕಾಲದಿಂದ ಕಚೇರಿಯೊಳಗೆ ಶಾಸಕ ನಾರಾಯಣಸ್ವಾಮಿ ಅವರು ಇದ್ದು, ತಮ್ಮ ರಿಯಲ್ ಎಸ್ಟೇಟ್ ಕೆಲಸ ಮಾಡಿಸಿಕೊಳ್ಳಲು ಮುಷ್ಕರದ ಸಮಯವನ್ನು ಬಳಸಿಕೊಂಡಿದ್ದಾರೆ. ಇದು ಇಡೀ ಜನಸಾಮಾನ್ಯರಿಗೆ ಮಾಡಿದ ದ್ರೋಹವಾಗಿದೆ. ಅಕ್ರಮವಾಗಿ ದಾಖಲೆ ತಿದ್ದಲು ಹೊರಗೆ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಲಭ್ಯವಿಲ್ಲದ ಸೇವೆಯು ಶಾಸಕರಿಗೆ ವಿಶೇಷವಾಗಿ ಹೇಗೆ ಸಿಗುತ್ತದೆ.
-ಬಿ.ಕೆ.ಶಿವಪ್ಪ, ಎಎಪಿ ಜಿಲ್ಲಾ ಉಸ್ತುವಾರಿ