Advertisement

ಕಬ್ಬಿನ ಬಿಲ್ ಶೀಘ್ರ ಪಾವತಿಗೆ ಶಾಸಕ ಗುತ್ತೇದಾರ ತಾಕೀತು

07:46 AM Jun 25, 2019 | Suhan S |

ಆಳಂದ: ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಶೀಘ್ರವೇ ಬಿಲ್ ಪಾವತಿಸದೆ ಹೋದಲಿ ಪರಿಸ್ಥಿತಿ ನೆಟ್ಟಿಗಿರಲ್ಲ ಎಂದು ಶಾಸಕ ಸುಭಾಷ ಗುತ್ತೇದಾರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಖಡ‌ಕ್ಕಾಗಿ ಕೊನೆ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಭೂಸನರ ಹತ್ತಿರದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ರೈತ ಮುಖಂಡರೊಂದಿಗೆ ಸೋಮವಾರ ಹಠಾತ್‌ ಭೇಟಿ ನೀಡಿ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ

ರಾಧಾಕೃಷ್ಣ ಅವರೊಂದಿಗೆ ಮಾತನಾಡಿದ ಶಾಸಕರು, ರೈತರು ಸಂಕಷ್ಟದಲ್ಲಿದ್ದಾರೆ. ಬಿಲ್ ಪಾವತಿಸಬೇಕು ಎಂದು ಮೂರನೇ ಸಲ ಭೇಟಿ ನೀಡಿ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಜಿಲ್ಲೆಯ ಅಕ್ಕಪಕ್ಕದ ಕಾರ್ಖಾನೆಗಳು ಈಗಾಗಲೇ ಬಿಲ್ ಪಾವತಿಸಿರುವಾಗ ಎನ್‌ಎಸ್‌ಎಲ್ ಕಾರ್ಖಾನೆಯಿಂದಲೇ ವಿಳಂಬ ಮಾಡಲಾಗುತ್ತಿದೆ. ಕಳೆದ ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆ, ಬೆಳೆ ಕೈಗೆ ಬಾರದೆ, ಬಿತ್ತನೆ ಬೀಜ ಗೊಬ್ಬರಕ್ಕೆ ಹಣವಿಲ್ಲದೆ ರೈತರು ಪರದಾಡುತ್ತಿದ್ದಾರೆ. ನಾಲ್ಕಾರು ತಿಂಗಳಾದರೂ ಬಿಲ್ ನೀಡದ ನೀವು ರೈತರ ತಾಳ್ಮೆ ಪರೀಕ್ಷಿಸಬೇಡಿ. ಕುಂಟು ನೆಪ ಹೇಳಿ ದಿನದೊಡಿದರೆ ಸಾಲದು. ಸರ್ಕಾರ ನಿಗದಿಪಡಿಸಿದ ದರದಲ್ಲಿ ಜುಲೈ 10ರೊಳಗೆ ಎಲ್ಲ ರೈತರ ಬಿಲ್ ಪಾವತಿಸದೆ ಹೋದಲ್ಲಿ ಕಬ್ಬು ಬೆಳೆಗಾರರೊಂದಿಗೆ ಕಾರ್ಖಾನೆ ಎದುರು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕಬ್ಬಿನ ದರ ನೀಡುವಲ್ಲೂ ಅನ್ಯ ಕಾರ್ಖಾನೆಗಳಿಗಿಂತ ಕಡಿಮೆ ದರ ನೀಡಲಾಗುವುದು ಎಂಬ ಆಡಳಿತ ಮಂಡಳಿ ನಿಲುವು ರೈತ ವಿರೋಧಿಯಾಗಿದೆ. ಕಾರ್ಖಾನೆ ಸಮಸ್ಯೆ ಏನೆ ಇದ್ದರೂ ಇದರ ಬಗ್ಗೆ ಗಮನಹರಿಸಿ ಸಕರಿಸಲು ಸರ್ಕಾರದ ಗಮನಕ್ಕೆ ತಂದು ಪ್ರಯತ್ನಿಸಲಾಗುವುದು. ಆದರೆ ನನಗೆ ರೈತರೇ ಮುಖ್ಯ. ಅವರಿಗೆ ಎದುರಾದ ಕಷ್ಟ ನಿವಾರಿಸುವುದು ನನ್ನ ಮೊದಲಾದ್ಯತೆಯಾಗಿದೆ. ನೀವು ಯಾವುದೇ ನೆಪ ಹೇಳಕೂಡದು ಎಂದು ಗುಡುಗಿದರು.

Advertisement

ಬಿಲ್ ಬಾಕಿಯಿಟ್ಟುಕೊಳ್ಳದೆ ಈ ಕೂಡಲೇ ಪೂರ್ಣವಾಗಿ ಅವರ ಖಾತೆಗೆ ಜಮಾ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಿ ಎಂದು ಎಚ್ಚರಿಕೆ ನೀಡಿದರು.

ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ರಾಧಾಕೃಷ್ಣ ಅವರು ಬಿಲ್ ಪಾವತಿಗೆ ಕ್ರಮಕೈಗೊಳ್ಳಲಾಗುವುದು. ಸಮಯಾವಕಾಶ ನೀಡಬೇಕು ಎಂದಾಗ ಶಾಸಕರು, ಸದ್ಯ ರೈತರ ಕೈಯಲ್ಲಿ ಹಣವಿಲ್ಲ. ಅವಕಾಶ ಕೊಡುತ್ತ ಕುಳಿತರೆ ರೈತರ ಗತಿಯೇನು? ಕಾರ್ಖಾನೆ ನಡೆಸಲು ಕೋಟ್ಯಂತರ ರೂ. ಬಂಡವಾಳ ಹೂಡಿದಂತೆ ರೈತರ ಬಿಲ್ ಪಾವತಿಯಲ್ಲೂ ಏನಾದರು ಪರ್ಯಾಯ ಕ್ರಮಕೈಗೊಂಡು ರೈತರ ವಿಶ್ವಾಸರ್ಹತೆ ಉಳಿಸಿಕೊಳ್ಳಿ ಎಂದರು.

ಶಾಸಕರಾಗಿ ಮೂರು ಬಾರಿ ಕಾರ್ಖಾನೆ ಬಾಗಿಲಿಗೆ ಬಂದು ಹೇಳಿದರೂ ಕಿಮ್ಮತ್ತಿಲ್ಲದಂತೆ ನಡೆದುಕೊಳ್ಳಲಾಗಿದೆ. ಇನ್ನೂ ಮುಂದೆ ಸಹಿಸಲಾಗದು. ಇಲ್ಲಿಗೆ ಬಂದ ಕಬ್ಬು ಬೆಳೆಗಾರರಿಗೆ ಯಾವಾಗ ಬಿಲ್ ಕೊಡುತ್ತಿರಿ ಎಂಬ ಭರವಸೆ ನೀಡಬೇಕು ಎಂದು ಪಟ್ಟುಹಿಡಿಕೊಂಡಾಗ ಕೆಲಕಾಲ ಆಡಳಿತ ಮಂಡಳಿ ಉಪಾಧ್ಯಕ್ಷರು ತಡವಡಿಸಿದರು.

ಶಾಸಕರೊಂದಿಗೆ ಆಗಮಿಸಿದ್ದ ಕಬ್ಬು ಬೆಳೆಗಾರ ಮುಖಂಡ ಶರಣಬಸಪ್ಪ ಮಲಶೆಟ್ಟಿ, ಅಶೋಕ ಗುತ್ತೇದಾರ, ರಾಜಶೇಖರ ಮಲಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಮತ್ತಿತರರು, ಬಿಲ್ ನೀಡುವಲ್ಲಿ ಕಾರ್ಖಾನೆ ಸುಳ್ಳು ಭರವಸೆ ಕೇಳಿ ಸಾಕಾಗಿದೆ. ಅಫಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆ ನೀಡಿದ ದರ 2200 ರೂ. ಬಿಲ್ ಪಾವತಿಸಬೇಕು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ 140 ರೂ. ನೆರವಾಗಿ ಖಾತೆಗೆ ಜಮಾ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ಉಪಾಧ್ಯಕ್ಷ ರಾಧಾಕೃಷ್ಣ, ಕಾರ್ಖಾನೆ ಆಡಳಿತ ಮಂಡಳಿ ಗಮನಕ್ಕೆ ತಂದು ಜುಲೈ 10ರೊಳಗೆ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 40 ಕೋಟಿ ರೂ. ಪಾವತಿಸಲಾಗಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಮಾಜಿ ಸದಸ್ಯ ವೀರಣ್ಣ ಮಂಗಾಣೆ ಇತರ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next