Advertisement

ಇದು ಬಿಜೆಪಿ ದುಬಾರಿ ದರ್ಬಾರ್‌: ಹೆಬ್ಟಾಳಕರ

03:35 PM Oct 08, 2021 | Team Udayavani |

ಬೆಳಗಾವಿ: ತೈಲ ಬೆಲೆ ಏರಿಕೆ, ಅಡಿಗೆ ಅನಿಲ ಬೆಲೆ ಹೆಚ್ಚಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೆಳಗಾವಿ ಗ್ರಾಮೀಣ ಶಾಸಕಿ ಮತ್ತು ಕೆಪಿಸಿಸಿ ವಕ್ತಾರರಾದ ಲಕ್ಷ್ಮಿ ಹೆಬ್ಟಾಳಕರ ಅವರು ಇದು ಬಿಜೆಪಿ ದುಬಾರಿ ದರ್ಬಾರ್‌ ಎಂದು ಟ್ವೀಟರ್‌ ಮೂಲಕ ಟೀಕಾ ಪ್ರಹಾರ ಮಾಡಿದ್ದಾರೆ.

Advertisement

ಕೇಂದ್ರ ಹಾಗು ರಾಜ್ಯ ಸರಕಾರದ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಹೆಬ್ಟಾಳಕರ ಹತ್ತು ಲಕ್ಷ ರೂ.ಗಿಂತಲೂ ಹೆಚ್ಚು ವಾರ್ಷಿಕ ಆದಾಯವಿರುವ, ಸಮರ್ಥ ಕುಟುಂಬಗಳು ತಮ್ಮ ಗ್ಯಾಸ್‌ ಸಬ್ಸಿಡಿ ಬಿಟ್ಟು ಕೊಡಿ, ಅದರಿಂದ ಅಡುಗೆ ಅನಿಲ ಖರೀದಿಸಲಾಗದ ಕುಟುಂಬಕ್ಕೆ ಉಚಿತ ಸಂಪರ್ಕ ಕಲ್ಪಿಸಬಹುದು ಎಂದು ಪ್ರಧಾನಿಯವರು ಮನವಿ ಮಾಡಿದ್ದರು. ಈಗ ನಿಜಕ್ಕೂ ಎಷ್ಟು ಬಡ ಕುಟುಂಬಗಳಿಗೆ ಉಚಿತ ಗ್ಯಾಸ್‌ ಸಂಪರ್ಕ ಸಿಕ್ಕಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಗೃಹ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಜನಸಾಮಾನ್ಯರು ತಮ್ಮ ಜೀವನ ನಡೆಸಲು ಮನೆಯಲ್ಲಿದ್ದ ಒಡವೆಗಳನ್ನು ಮಾರುವ ಸ್ಥಿತಿ ನಿರ್ಮಾಣವಾಗಿದೆ. ಅಚ್ಛೇದಿನ ಭರವಸೆ ನೀಡಿ, ಮನೆಯನ್ನೇ ಬರಿದಾಗಿಸುತ್ತಿದೆ ಬಿಜೆಪಿ ಸರ್ಕಾರ. ಬಡತನ, ಆರ್ಥಿಕ ಸಂಕಷ್ಟದ ಕಾರಣಕ್ಕೆ 1 ವರ್ಷದಲ್ಲಿ ರಾಜ್ಯದಲ್ಲಿ 850 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯದ ಆರ್ಥಿಕತೆಗೆ ಚಾಲನೆ ನೀಡುವ ಕಾರ್ಯಕ್ರಮ ರೂಪಿಸಬೇಕಾದ ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದೆ ಎಂದು ಟೀಕಿಸಿದ್ದಾರೆ.

ಗ್ಯಾಸ್‌ ಸಿಲಿಂಡರ್‌ ಖರೀದಿಯ ಬಳಿಕ ಬರುತ್ತಿದ್ದ ಸರ್ಕಾರದ ಸಬ್ಸಿಡಿ ಹಣ ಖಾತೆಗೆ ಬರುವುದು ನಿಂತು ಸುಮಾರು ಎರಡು ವರ್ಷಗಳೇ ಕಳೆದಿವೆ. ಯಾರಿಗೂ ಏನೂ ತಿಳಿಸದೆ ಸರ್ಕಾರ ಸಬ್ಸಿಡಿ ನಿಲ್ಲಿಸಿದ್ದು ಏಕೆ? ಹಾಗಾದರೆ ಉಜ್ವಲ ಯೋಜನೆಯ ಪ್ರಯೋಜನವೇನು ಮೋದಿ ಅವರೇ ಎಂದು ಖಾರವಾಗಿ ಪ್ರಶ್ನಿಸಿರುವ ಹೆಬ್ಟಾಳಕರ, ಪ್ರತಿ ಲೀಟರ್‌ ಪೆಟ್ರೋಲ್‌ ನ ಮೂಲ ಬೆಲೆ 37 ರೂ. ಅದರ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ 32.90 ರೂ. ರಾಜ್ಯಗಳು ವಿಧಿಸುವ ತೆರಿಗೆ ಸುಮಾರು 28 ರೂ. ಸಾಗಣೆ, ಸಂಸ್ಕರಣೆ ಮತ್ತು ಡೀಲರ್‌ ಕಮಿಷನ್‌ 8 ರೂ. ಅಲ್ಲಿಗೆ ಪೆಟ್ರೋಲ್‌ ಬೆಲೆ 106ರೂ ದಾಟುತ್ತದೆ. ಬಿಜೆಪಿ ಸರಕಾರ ತೆರಿಗೆ ಹಣದ ಮೂಲಕ ಜನರ ಲೂಟಿಗಿಳಿದಿದೆ ಎಂದು ಹೇಳಿದ್ದಾರೆ.

ಅಡುಗೆ ಅನಿಲ ಬೆಲೆ 15 ರೂ. ಹೆಚ್ಚಳವಾಗಿದೆ. 14.2 ಕೆಜಿಯ ಸಿಲಿಂಡರ್‌ ಬೆಲೆ 902.5 ರೂ. ತಲುಪಿದೆ. ಕಳೆದ 2 ತಿಂಗಳಲ್ಲಿ ನಾಲ್ಕನೇ ಬಾರಿ ಗ್ಯಾಸ್‌ ಬೆಲೆ ಏರಿಕೆಯಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್‌ ಕೊಡುವುದಾಗಿ ಭರವಸೆ ನೀಡಿ, ಜನರ ಉಜ್ವಲ ಭವಿಷ್ಯವನ್ನೇ ಬಿಜೆಪಿ ಹಾಳು ಮಾಡಿದೆ. ಅಚ್ಛೇ ದಿನದ ಭರವಸೆ ನೀಡಿ, ಕೆಟ್ಟ ದಿನಗಳ ಅನುಭವ ಮಾಡಿಸುತ್ತಿದೆ ಎಂದು ಹೆಬ್ಟಾಳಕರ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next