Advertisement

ಹೈಟೆಕ್‌ ಬಾತ್‌ ರೂಂ ಕಲ್ಪನೆಗೆ ಶಾಸಕ ಲಕ್ಷ್ಮಣ ಸವದಿ ಲೇವಡಿ

10:55 AM Jun 20, 2017 | Harsha Rao |

ವಿಧಾನಸಭೆ: ಹಳ್ಳಿಗಳಲ್ಲಿ ಸ್ನಾನಕ್ಕೆ ಹೈಟೆಕ್‌ ಬಾತ್‌ ರೂಂ ಇಲ್ಲ, ಶವರ್ರು ಇಲ್ಲ, ಶಾಂಪೂನು ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ ಪಾಟೀಲರನ್ನು ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಮಾರ್ಮಿಕವಾಗಿ ಲೇವಡಿ ಮಾಡಿದರು. ವಿಧಾನ ಸಭೆಯಲ್ಲಿ ಸೋಮವಾರ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆ ಸಂದರ್ಭ ದಲ್ಲಿ ಲಕ್ಷ್ಮಣ ಸವದಿ ವ್ಯಂಗ್ಯವಾಗಿಯೇ ಸಚಿವ ಎಚ್ಕೆ ಪಾಟೀಲರನ್ನು ತರಾಟೆಗೆ ತಗೆದುಕೊಂಡರು. “ಸಚಿವರು ವಿಮಾನದಲ್ಲಿರುವಂತೆ ಹೈಟೆಕ್‌ ಬಾತ್‌ ರೂಂಗಳನ್ನ ಹಳ್ಳಿ ಹಳ್ಳಿಗಳಲ್ಲಿ ಕಟ್ಟಿಸುತ್ತೇ  ನೆಂದು ಹೇಳಿದ್ದರು. ಬಾತ್‌ ರೂಂನಲ್ಲಿ ಸ್ನಾನಕ್ಕೆ ಶವರ್‌ ಕೂರಿಸ್ತೇವೆ, ತಲೆಗೆ ಹಚ್ಚಲು ಶಾಂಪೂ ಇಡ್ತೇವೆ, ಕೂದಲು ಒಣಗಿಸಲು ಹೇರ್‌ ಡ್ರೈ ಕೊಡುತ್ತೇವೆ ಎಂದೂ ಹೇಳಿದ್ದರು’ ಎಂದು ನೆನಪಿಸಿದರು.

Advertisement

“ನಾನು ಇದು ಸಾಧ್ಯನಾ ಎಂದು ಪ್ರಶ್ನಿಸಿದ್ದೆ ಅದಕ್ಕೆ ಅವರು ಯಾಕ್ರೀ..ಹಳ್ಳಿ ಜನ ಹೈಟೆಕ್‌ ಬಾತ್‌ ರೂಂನಲ್ಲಿ ಶವರ್‌
ಬಾತ್‌ ಮಾಡಬಾರದಾ..? ಎಂದು ಕೇಳಿದ್ದರು. ಅದಕ್ಕೆ ನಾನು ಶವರ್‌, ಶಾಂಪೂ ಎಲ್ಲವೂ ಓಕೆ ಆದರೆ ಹೇರ್‌ ಡ್ರೈ
ಮಾತ್ರ ಇಡಬೇಡಿ. ನಮ್ಮಲ್ಲಿ ಹೇರ್‌ಡ್ರೈ ಬಳಸಿ ಕೂದಲು ಒಣಗಿಸಿದರೆ ತಲೆ ಕೂದಲು ಉದುರುತ್ತವೆ. ನಂತರ ನೀವು
“ಕೂದಲು ತರಿಸೋ ಭಾಗ್ಯ ಯೋಜನೆ’ ತರಬೇಕಾಗುತ್ತದೆ ಎಂದೂ ಹೇಳಿದ್ದೆ. ಆದರೆ ಇದ್ಯಾವುದೂ ಇದುವರೆಗೆ ಸಾಕಾರಗೊಂಡಿಲ್ಲ’ ಎಂದು ತಮ್ಮದೇ ಶೈಲಿಯಲ್ಲಿ ಸಚಿವರನ್ನು ಲೇವಡಿ ಮಾಡಿದರು ಶುದ್ಧ ಕುಡಿಯುವ ನೀರಿನ ಘಟಕ
ಯೋಜನೆ ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ ಎಂದು ಆರೋಪಿಸಿದ ಸವದಿ, ಶಾಸಕರು ಘಟಕ ಸ್ಥಾಪಿಸಿದರೆ ಸರ್ಕಾರ 
ದಿಂದ 5 ಲಕ್ಷ ರೂ ನೀಡಲಾಗುತ್ತದೆ. ಆದರೆ ಖಾಸಗಿ ಏಜನ್ಸಿಯವರು ನಿರ್ಮಾಣ ಮಾಡುವುದಕ್ಕೆ 10 ರಿಂದ 15 ಲಕ್ಷ ರೂ.ಗೆ ಟೆಂಡರ್‌ ನೀಡಲಾಗುತ್ತದೆ ಈ ತಾರತಮ್ಯವೇಕೆ ಎಂದು ಪ್ರಶ್ನಿಸಿದರು.
**
ಕೋಣ ಭಾಗ್ಯ ಯೋಜನೆ ತನ್ನಿ
ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಲು ಸರ್ಕಾರ “ಕೋಣ ಭಾಗ್ಯ’ ಯೋಜನೆ ಜಾರಿಗೆ ತರಬೇಕಾಗಿದೆ. ಹಳ್ಳಿ ರಸ್ತೆಗಳಲ್ಲಿ ಎತ್ತಿನ ಗಾಡಿ, ಜೀಪು, ಮೋಟಾರು ಸೈಕಲ್‌, ಕುದುರೆ ಸಹ ಸಂಚರಿಸದಂತಹ ಸ್ಥಿತಿಯಿದೆ. ಈ ರಸ್ತೆಗಳಲ್ಲಿ ಓಡಾಡಲು ಅನೇಕ ಭಾಗ್ಯಗಳನ್ನು ಕೊಟ್ಟಿರುವ ಸರ್ಕಾರ ಒಂದು ಹಳ್ಳಿಗೆ 15ರಿಂದ 20 ಕೋಣಗಳನ್ನು ನೀಡಿದರೆ ಜನರು ಕೋಣದ ಮೇಲೆ ಕೂತು ಓಡಾಡುತ್ತಾರೆ ಎಂದು ಲಕ್ಷಣ ಸವದಿ ವ್ಯಂಗ್ಯವಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
ಇಲಾಖೆಯಲ್ಲಿ ಎಚ್‌.ಕೆ ಪಾಟೀಲರ ಮಾತನ್ನು ಅಧಿಕಾರಿಗಳು ಎಳ್ಳಷ್ಟೂ ಕೇಳುವುದಿಲ್ಲ. ಸಚಿವರು ನೀಡಿದ ಭರವಸೆಗಳನ್ನು ಅಧಿಕಾರಿಗಳು ಕಾರ್ಯರೂಪಕ್ಕೇ ತರುವುದಿಲ್ಲವೆಂದು ಸವದಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next