Advertisement

ಕಿಮ್ಸ್‌ನಲ್ಲಿ ತಾಯಿ ದಾಖಲಿಸಲು ಶಾಸಕಿ ಕುಸುಮಾ ಪರದಾಟ

05:48 PM May 04, 2021 | Team Udayavani |

ಹುಬ್ಬಳ್ಳಿ: ಕೊರೊನಾ ಸೋಂಕಿಗೊಳಗಾದ ತನ್ನ ತಾಯಿಗೆ ಕಿಮ್ಸ್‌ನಲ್ಲಿ ಬೆಡ್‌ ಸಿಗದೆ ಪರದಾಡುವಂತಾಯಿತೆಂದು ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಪಕ್ಷದ ಶಾಸಕರ ವರ್ಚುವಲ್‌ ಸಭೆಯಲ್ಲಿ ಕಣ್ಣೀರಿಟ್ಟ ಘಟನೆ ನಡೆದಿದ್ದು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಮ್ಸ್‌ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ನಂತರ ಬೆಡ್‌ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಕಿಮ್ಸ್‌ ಅಧಿಕಾರಿಗಳು ಅವರಿಗಾಗಿ ಶುಕ್ರವಾರ ಸಂಜೆಯೇ ವಿಶೇಷ ವಾರ್ಡ್‌ ವ್ಯವಸ್ಥೆ ಮಾಡಿದ್ದರೂ ದಾಖಲಿಸದೆ ಹಿಂದಕ್ಕೆ ಕರೆದೊಯ್ದರು ಎಂದಿದ್ದಾರೆ.

Advertisement

ಶಾಸಕಿ ಕುಸುಮಾವತಿ ಶಿವಳ್ಳಿ ಅವರ ತಾಯಿ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಬೆಡ್‌ ಸಲುವಾಗಿ ಶಾಸಕಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಆಸ್ಪತ್ರೆಯಲ್ಲಿ ಪರದಾಡಿದ್ದಾರೆ. ಕೊನೆಗೆ ಪಕ್ಷ ನಡೆಸುತ್ತಿದ್ದ ವಿಡಿಯೋ ಕಾನ್ಫರೆನ್ಸ್‌ ವೇಳೆ ಕಣ್ಣೀರು ಹಾಕುತ್ತ, ಶಾಸಕಿಯಾಗಿ ಹೇಳಿದರೂ ನನ್ನ ತಾಯಿಗೆ ಬೆಡ್‌ ಸಿಗಲಿಲ್ಲ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೂ ತಿಳಿಸಿದ್ದೇನೆ. ನನಗೆ ಹೀಗಾದರೆ ಜನಸಾಮಾನ್ಯರ ಸ್ಥಿತಿ ಹೇಗಿರಬಾರದೆಂದು ತಮಗಾದ ಪರಿಸ್ಥಿತಿಯನ್ನು ಪಕ್ಷದ ಮುಖಂಡರ ಎದುರು ತೋಡಿಕೊಂಡಿದ್ದಾರೆ. ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಕ್ಷಣ ಕಿಮ್ಸ್‌ನ ನಿರ್ದೇಶಕರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ತದ ನಂತರ ತಕ್ಷಣವೇ ಆಸ್ಪತ್ರೆಯವರು ಶಾಸಕಿ ಅವರ ತಾಯಿಗೆ ವಿಶೇಷ ವಾರ್ಡ್‌ ವ್ಯವಸ್ಥೆ ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆಂದು ತಿಳಿದು ಬಂದಿದೆ. ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ|ಅರುಣ ಕುಮಾರ ಚವ್ಹಾಣ ಅವರು ಹೇಳುವ ಪ್ರಕಾರ, ಶಾಸಕಿ ಕುಸುಮಾವತಿ ಶಿವಳ್ಳಿ ಅವರು ತಮ್ಮ ತಾಯಿಗೆ ಹುಷಾರಿಲ್ಲವೆಂದು ಶುಕ್ರವಾರ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ನಾನೇ ಖುದ್ದಾಗಿ ನಿಂತು ಅವರಿಗೆ ವಿಶೇಷ ವಾರ್ಡ್‌ ವ್ಯವಸ್ಥೆ ಮಾಡಿ ಎಲ್ಲ ವೈದ್ಯಕೀಯ ತಪಾಸಣೆ ಮಾಡಿದ್ದೆವು. ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಲ್ಲಿಯೇ ದಾಖಲು ಮಾಡಿ ಎಂದು ತಿಳಿಸಿದ್ದೆವು. ಆದರೆ ಅವರು ಮನೆಗೆ ಕರೆದುಕೊಂಡು ಹೋದರು. ಹಾಗೇನಾದರೂ ಸಮಸ್ಯೆಯಾದರೆ ದಿನದ 24 ತಾಸು ಕರೆ ಮಾಡಿ. ನಾವು ಅಟೆಂಡ್‌ ಮಾಡುತ್ತೇವೆಂದು ಹೇಳಿ ಮೊಬೈಲ್‌ ಸಂಖ್ಯೆ ಸಹ ಕೊಟ್ಟು ಕಳುಹಿಸಿದ್ದೆವು. ಆದರೆ ಸೋಮವಾರ ಮತ್ತೆ ಅವರಿಗೆ ಸಮಸ್ಯೆಯಾದಾಗ ವಿಶೇಷ ವಾರ್ಡ್‌ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next