Advertisement

ಎಡವಿ ಕ್ಷಮೆಯಾಚನೆ; ವಿವಾದಿತ ಹೇಳಿಕೆ ನೀಡಿ ಕ್ಷಮೆ ಕೋರಿದ ರಮೇಶ್‌ ಕುಮಾರ್‌

01:17 AM Dec 18, 2021 | Team Udayavani |

ಹೊಸದಿಲ್ಲಿ /ಬೆಳಗಾವಿ: ಮಾಜಿ ಸ್ಪೀಕರ್‌ ಕಾಂಗ್ರೆಸ್‌ನ ಕೆ.ಆರ್‌. ರಮೇಶ್‌ ಕುಮಾರ್‌ ಆಡಿದ ಮಾತು ಗಳಿಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಕ್ಷಮೆ ಕೋರಿದ್ದಾರೆ. ಆದರೂ ಆಕ್ರೋಶ ತಣ್ಣಗಾಗಿಲ್ಲ.

Advertisement

ರಮೇಶ್‌ಕುಮಾರ್‌ ಮಾತುಗಳಿಂದ ಕಾಂಗ್ರೆಸ್‌ ವರಿಷ್ಠರಿಗೂ ಮುಜುಗರ ಉಂಟಾಗಿದೆ. ಅವರ ಹೇಳಿಕೆಯನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಖಂಡಿಸಿದ್ದಾರೆ. ಸಂಸತ್‌ ಅಧಿವೇಶನದಲ್ಲೂ ವಿವಾದ ಪ್ರತಿಧ್ವನಿಸಿತಲ್ಲದೆ ದೇಶಾದ್ಯಂತ ಪಕ್ಷಾತೀತ ಖಂಡನೆ ವ್ಯಕ್ತವಾಗಿದೆ.

ಗುರುವಾರದ ಆಕ್ಷೇಪಾರ್ಹ ಮಾತುಗಳು ವಿವಾದಕ್ಕೆ ಕಾರಣವಾಗಿರುವಂತೆಯೇ ಅಧಿ ವೇಶನ ದಲ್ಲಿ ಮಾತನಾಡಿದ ಶಾಸಕ ರಮೇಶ್‌ ಕುಮಾರ್‌ ಕ್ಷಮೆಯಾಚಿಸಿದರು. ನಾನು ಆಡಿರುವ ಮಾತುಗಳಿಂದ ಯಾರಿಗೇ ಆಗಲಿ, ವಿಶೇಷವಾಗಿ ಮಹಿಳೆಯರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಕ್ಷಮೆ ಕೋರುತ್ತೇನೆ. ಹೆಣ್ಣಿಗೆ ಅಪಮಾನ ಮಾಡಬೇಕು ಅಥವಾ ಅಗೌರವ ತೋರಬೇಕು ಎಂಬ ಉದ್ದೇಶದಿಂದ ಆ ಮಾತುಗಳನ್ನು ಆಡಿಲ್ಲ. ಯಾವ ಸಂದರ್ಭದಲ್ಲಿ ನಾನು ಆ ಮಾತು ಹೇಳಿದ್ದೇನೆ ಎಂಬುದನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಆದರೂ ಸದನವನ್ನು ಗೌರವಿಸಿ, ಪ್ರತಿಷ್ಠೆ ಇಲ್ಲದೆ ಕ್ಷಮೆ ಕೋರುತ್ತೇನೆ ಎಂದರು.

ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಆರ್‌. ಪೂರ್ಣಿಮಾ ಮತ್ತಿತರ ಆಡಳಿತ ಪಕ್ಷದ ಸದಸ್ಯರು ಮಾತನಾಡಲು ಮುಂದಾದರು. ಆದರೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಶಾಸಕರು ಕ್ಷಮೆ ಕೋರಿದ್ದಾರೆ. ಇದನ್ನು ವಿವಾದವಾಗಿ ಮುಂದುವರಿಸುವುದು ಸರಿಯಲ್ಲ ಮತ್ತು ಇದನ್ನು ಮುಂದೆ ಎಲ್ಲಿಯೂ ಬಳಸಲು ಹೋಗಬಾರದು ಎಂದರು.

ಇದನ್ನೂ ಓದಿ:ಬಾಂಗ್ಲಾದಲ್ಲಿ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್‌

Advertisement

ಸಂಸತ್ತಿನಲ್ಲಿಯೂ ಪ್ರಸ್ತಾವ
ಲೋಕಸಭೆ, ರಾಜ್ಯಸಭೆಯಲ್ಲಿ ಕೂಡ ಈ ಬಗ್ಗೆ ಖಂಡನೆ ವ್ಯಕ್ತವಾಯಿತು. ಸಚಿವೆ ಸ್ಮೃತಿ ಇರಾನಿ ಇರಾನಿ ಈ ವಿವಾದವನ್ನು ಪ್ರಸ್ತಾವಿಸಿದರು. ರಾಜ್ಯಸಭೆಯಲ್ಲಿ ಸಂಸದೆ ಜಯಾ ಬಚ್ಚನ್‌, ಇದೊಂದು ನಾಚಿಕೆಗೇಡಿನ ವರ್ತನೆ. ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ ಕಾಂಗ್ರೆಸ್‌ ಕಠಿನವಾಗಿ ವರ್ತಿಸಬೇಕು. ಸದನದಲ್ಲಿ ಇಂಥ ಮಾತುಗಳು ಸಾಧುವಲ್ಲ ಎಂದು ಕಟುವಾಗಿ ಟೀಕಿಸಿದರು.

ಇದಕ್ಕೆ ಮುನ್ನ ಟ್ವೀಟ್‌ ಮಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ, ಸದನದಲ್ಲಿ ಸ್ಪೀಕರ್‌ ಮತ್ತು ನಮ್ಮ ಪಕ್ಷದ ಶಾಸಕರು ಮಾತನಾಡಿದ ಅಂಶಗಳನ್ನು ಒಪ್ಪುವುದಿಲ್ಲ. ಸ್ಪೀಕರ್‌ ಸದನದ ಘನತೆಯನ್ನು ಎತ್ತಿ ಹಿಡಿಯಬೇಕು ಮತ್ತು ಹಿರಿಯ ಶಾಸಕರ ನಡೆ-ನುಡಿ ಎಲ್ಲರೂ ಅನುಸರಿಸುವಂತೆ ಇರಬೇಕು ಎಂದು ಬರೆದುಕೊಂಡರು.

ರಾಹುಲ್‌ ಮೌನವೇಕೆ?
ರಮೇಶ್‌ ಕುಮಾರ್‌ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಮುಖಂಡರಾಗಿರುವ ರಾಹುಲ್‌ ಗಾಂಧಿ ಏಕೆ ಮೌನ ವಾಗಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ. ಪಕ್ಷದ ವಕ್ತಾರೆ ಅಪರಾಜಿತಾ ಸಾರಂಗಿ ಕಾಂಗ್ರೆಸ್‌ ಮುಖಂಡರಿಗೆ ಮಹಿಳೆಯರ ವಿರುದ್ಧ ಹೇಳಿಕೆ ನೀಡಿದ ಇತಿಹಾಸವೇ ಇದೆ ಎಂದರು. ಬಿಜೆಪಿಯ ಮತ್ತೂಬ್ಬ ವಕ್ತಾರ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಕೂಡ ಹೇಳಿಕೆಯನ್ನು ಖಂಡಿಸಿದ್ದಾರೆ.

ಕರ್ನಾಟಕದ ಶಾಸಕರು ಆಡಿದ ಮಾತು ಖಂಡನೀಯ. ಒಂಬತ್ತು ವರ್ಷಗಳ ಹಿಂದೆ ನಿರ್ಭಯಾಳ ಮೇಲೆ ಚಲಿಸುತ್ತಿರುವ ಬಸ್‌ನಲ್ಲಿ ನಿರ್ದಯವಾಗಿ ಅತ್ಯಾಚಾರ ಎಸಗಲಾಗಿತ್ತು. ಅವರು ಇಂಥ ಘಟನೆಗಳನ್ನು ತಮಾಷೆಯಿಂದ ಕಾಣುತ್ತಿದ್ದಾರೆ.
-ನಿರ್ಭಯಾ ತಾಯಿ

ಮಹಿಳೆಯರ ಬಗ್ಗೆ ಕಾಳಜಿ, ಗೌರವ ಇರುವುದಾದರೆ ಅತ್ಯಾಚಾರವಾಗುತ್ತಿರು ವುದನ್ನು ಆನಂದಿಸಬೇಕು ಎಂದು ಹೇಳಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಿ. ಅನಂತರ ಸದನದ ಬಾವಿಯಲ್ಲಿ ಬಂದು ಪ್ರತಿಭಟನೆ ನಡೆಸಲಿ. ಬಳಿಕ ಈ ದೇಶದ ಮಹಿಳೆಯರು ಮತ್ತು ಮಕ್ಕಳ ಪರವಾಗಿ ಯಾರು ಮಾತನಾಡುತ್ತಾರೆ ಎಂದು ನೋಡೋಣ.
-ಸ್ಮೃತಿ ಇರಾನಿ, ಕೇಂದ್ರ ಸಚಿವೆ

ಅತ್ಯಾಚಾರ ಎನ್ನುವುದೇ ಹೀನ ಕೃತ್ಯ. ಹೀಗಾಗಿ ರಮೇಶ್‌ ಕುಮಾರ್‌ ನೀಡಿದ ಹೇಳಿಕೆಯನ್ನು ಖಂಡಿಸುತ್ತೇನೆ. ಇಂಥ ಮಾತುಗಳನ್ನು ಹೇಗೆ ಆಡುತ್ತಾರೆ ಎಂದೇ ಅರ್ಥವಾಗುವುದಿಲ್ಲ.
-ಪ್ರಿಯಾಂಕಾ ವಾದ್ರಾ,
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next