Advertisement

ದೂರು ವಿರುದ್ದ ಕಾನೂನು ಹೋರಾಟ: ಕೆಎಂಶಿ 

03:12 PM Mar 30, 2023 | Team Udayavani |

ಹಾಸನ: ಅರಸೀಕೆರೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯವರು ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ. ತನಿಖೆ ಮುಗಿದ ನಂತರ ಮಾನನಷ್ಟ ಮೊಕದ್ದಮೆಯಷ್ಟೇ ಅಲ್ಲ. ಏನೇನು ಕ್ರಮಗಳು ಸಾಧ್ಯವೋ ಅವೆಲ್ಲ ಕ್ರಮಗಳನ್ನೂ ದೂರುದಾರರ ವಿರುದ್ಧ ಕೈಗೊಳ್ಳುತ್ತೇವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಅನುದಾನದಲ್ಲಿ ಚೆಕ್‌ ಡ್ಯಾಂಗಳ ಬದಲು ಕಾಂಕ್ರಿಟ್‌ ರಸ್ತೆ ಕಾಮಗಾರಿಗಳನ್ನು ಮಾಡಿಸಿದ್ದರೆ, ಅದಕ್ಕೂ ಶಾಸಕನಾದ ನನಗೂ ಸಂಬಂಧವಿಲ್ಲ. ಕ್ರಿಯಾ ಯೋಜನೆ ರೂಪಿಸಿದ ಎಂಜಿನಿಯರ್‌ಗಳು ಹಾಗೂ ಅನುಮೋದನೆ ನೀಡಿದ Óಸಚಿವರ ವಿರುದ್ಧ ದೂರು ನೀಡಬೇಕೇ ಹೊರತು ಶಾಸಕನಾದ ನನ್ನ ಮೇಲೆ ಆರೋಪ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿರುವುದು ಅರ್ಥಹೀನ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಬೇಡಿಕೆ ಸಲ್ಲಿಸುವುದು ಶಾಸಕನ ಕರ್ತವ್ಯ. ಆದರೆ, ಆ ಯೋಜನೆಗಳು ನಿಯಮಬದ್ಧವಲ್ಲದಿದ್ದರೆ ತಿರಸ್ಕರಿಸುವುದು ಎಂಜಿನಿಯರುಗಳು ಹಾಗೂ ಸಂಬಂಧಪಟ್ಟ ಸಚಿವರಿಗೆ ಬಿಟ್ಟದ್ದು. ಅದಕ್ಕೆ ಶಾಸಕ ಹೊಣೆಗಾರನಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ದೂರುದಾರರಿಗೆ ಸವಾಲ್‌: ನೀರಾವರಿ ನಿಗಮಗಳ ಅನುದಾನದಲ್ಲಿ ರಸ್ತೆ ಕಾಮಗಾರಿಗಳು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕಾಮಗಾರಿಗಳಾಗಿವೆ. ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವವ ರು ತಾಕತ್ತಿದ್ದರೆ ಎಲ್ಲ ನೀರಾವರಿ ನಿಗಮಗಳೂ ಯಾವ್ಯಾವ ಕಾಮಗಾರಿಗೆ ಅನು ದಾನ ಬಿಡುಗಡೆ ಮಾಡಿವೆ ಎಂಬ ಮಾಹಿತಿ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು.

ಹಣ ದುರ್ಬಳಕೆ ಆಗಿಲ್ಲ: ಅರಸೀಕೆರೆ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ನಾಲೆ 53 ಕಿ.ಮೀ. ಹಾದು ಹೋಗಿದೆ. ನಾಲೆ ನಿರ್ಮಾಣದ ಸಂದರ್ಭ ದಲ್ಲಿ ಹಲವು ಗ್ರಾಮಗಳ ರಸ್ತೆಗಳು ಹಾಳಾ ಗಿವೆ. ಅವುಗಳನ್ನು ದುರಸ್ತಿ ಮಾಡುವುದು ಎತ್ತಿನಹೊಳೆ ಯೋಜನೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಜವಾಬ್ದಾರಿ. ಎಸ್‌ಸಿಪಿ, ಟಿಎ ಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಅರಸೀಕೆರೆ ಕ್ಷೇತ್ರದಲ್ಲಿಯೂ ರಸ್ತೆ ಕಾಮಗಾರಿ ನಡೆದಿರಬಹುದು. ಆದರೆ ಹಣ ದುರ್ಬಳಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ತನಿಖೆ ಎದುರಿಸಲು ಸಿದ್ಧ: ಎತ್ತಿನಹೊಳೆ ಯೋಜನೆಯಡಿ ಅರಸೀಕೆರೆ ಕ್ಷೇತ್ರದಲ್ಲಿ 100 ಕೋಟಿ ರೂ. ಅನುದಾನ ದುರ್ಬಳಕೆಯಾಗಿದೆ ಎಂದು ದೂರು ನೀಡಲಾಗಿದೆ. ಆದರೆ 2018ರಿಂದ ಈ ವರ್ಷದವರೆಗೆ ಬಂದಿರುವ ಅನುದಾನ ಗರಿಷ್ಠ 80 ಕೋಟಿ ರೂ.ಆಗಬಹುದು ಅಷ್ಟೇ. ಈ ಬಗ್ಗೆ ತನಿಖೆ ನಡೆಯಲಿ, ಎದುರಿಸಲು ಸಿದ್ಧ. ಪಂಚಾಯತ್‌ರಾಜ್‌ ಇಲಾಖೆಯಿಂದ 150 ಕೋಟಿ ರೂ. ದುರ್ಬಳಕೆಯಾಗಿದೆ ಎಂಬುದು ಆಧಾರ ರಹಿತ. ಮಾಹಿತಿ ಹಕ್ಕು ಕಾಯ್ದೆಯನ್ನು ದೂರುದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಮಗಾರಿಯಲ್ಲಿ ಅಕ್ರಮ ಹಾಗೂ ಕಳಪೆ ಕಾಮಗಾರಿಗಳಾಗಿದ್ದರೆ ತನಿಖೆ ಮಾಡಿಸಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಅದು ಬಿಟ್ಟು ಕ್ಷೇತ್ರದಲ್ಲಿ ಬಿಜೆಪಿಯ ವರು ಅಭಿವೃದ್ಧಿಗೆ ವಿರೋಧಿ ಧೋರಣೆ ಅನುಸರಿಸುತ್ತಿರೋದು ಸರಿಯಲ್ಲ ಎಂದು ಟೀಕಿಸಿದರು.

Advertisement

ಎನ್‌.ಆರ್‌.ಸಂತೋಷ್‌ ವಿರುದ್ಧ ಕಿಡಿ: ವಿವಿಧ ಯೋಜನೆಗಳ ಅನುದಾನವನ್ನು ಎನ್‌ಆರ್‌ಇಜಿಗೆ ಕನ್‌ವರ್ಷನ್‌ ಮಾಡಿದರೆ ಶೇ.20 ರಷ್ಟು ಹೆಚ್ಚು ಅನುದಾನ ಸಿಗುತ್ತದೆ. ಹಾಗಾಗಿ ಕನ್‌ವರ್ಷನ್‌ ಮಾಡಿ ಕೆಲಸ ಮಾಡಿಸುವುದು ಕಾನೂನು ವಿರೋಧಿಯೇನೂ ಅಲ್ಲ ಎಂದು ಲೋಕಾಯಕ್ತರಿಗೆ ನೀಡಿ ರುವ ದೂರಿನ ಬಗ್ಗೆ ಸ್ಪಷ್ಟಡಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕಿ ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಬಿಜೆಪಿ ಮುಖಂಡ ಎನ್‌.ಆರ್‌.ಸಂತೋಷ ಸಂಚು ರೂಪಿಸಿದ್ದಾರೆ ಎಂದು ಹರಿಹಾಯ್ದರು.

ಸರ್ಕಾರಿ ಕಚೇರಿ ಕೆಲಸ ಲಾಡ್ಜ್ನಲ್ಲಿ ಮಾಡಿದ್ದೇಕೆ?: ಪಂಚಾಯತ್‌ರಾಜ್‌ ಇಲಾಖೆ ಸಹಾಯಕ ಎಂಜಿನಿಯರ್‌ ಉಮೇಶ್‌ ಅವರು ಅರಸೀಕೆರೆಯ ಕೆಪಿಎಸ್‌ ಲಾಡ್ಜ್ನಲ್ಲಿ ಕಾಮಗಾರಿಗಳ ಬಿಲ್‌ ಬರೆಯುತ್ತಿದ್ದರು. ಇದು ಸರಿಯಾದ ಕ್ರಮವಲ್ಲ. ಆದರೇ ಮಾ.17ರಂದು ಎಂ.ಬಿ.ಬುಕ್‌ಗಳು (ಅಳತೆ ಮಾಪನ ಪುಸ್ತಕ) ಸೇರಿದಂತೆ ದಾಖಲೆಗಳನ್ನು ಕಿತ್ತುಕೊಂಡ ಬಿಜೆಪಿ ಮುಖಂಡರು 10 ದಿನ ಸತಾಯಿಸಿರೋದು ಖಂಡನೀಯ. ಜಿಪಂ ಸಿಇಒ ನೋಟಿಸ್‌ ನೀಡಿದ ನಂತರ ಸಹಾಯಕ ಎಂಜಿನಿಯರ್‌ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವ ಸಂತೋಷ್‌ ಬೆಂಬಲಿಗರ ವಿರುದ್ಧ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸೇರ್ಪಡೆ ಖಚಿತ: ಕೆಎಂಶಿ: ಜೆಡಿಎಸ್‌ನಿಂದ ನಾನೇಕೆ ಹೊರಬಂದೆ ಎಂದು ಈಗ ಹೇಳುವುದರ ಅಗತ್ಯವಿಲ್ಲ. ಕ್ಷೇತ್ರದಲ್ಲಿ ನನ್ನ ಬೆಂಬಲಿಗರು ಕಾಂಗ್ರೆಸ್‌ ನಿಂದ ನಿಲ್ಲಬೇಕು ಎಂದು ಒತ್ತಾಯಿಸಿದರು. ಹಾಗಾಗಿ ನಾನು ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದೇನೆ. ಒಳ್ಳೆಯ ದಿನ ನೋಡಿ ಕಾಂಗ್ರೆಸ್‌ ಸೇರ್ಪಡೆ ಆಗುವೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವೆ ಎಂದು ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next