ಉಡುಪಿ: ಸರಕಾರಿ ಬಾಲಕಿಯರ ಪ. ಪೂ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಆರು ಮಂದಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕದೆ ತರಗತಿಗೆ ಹಾಜರಾಗುವಂತೆ ಮನವಿ ಮಾಡಲಾಗುವುದು. ಒಪ್ಪದಿದ್ದರೆ ಅವರಿಗೆ ಪ್ರತ್ಯೇಕ ಆನ್‌ಲೈನ್ ತರಗತಿ ಕಲ್ಪಿಸಿ, ಪರೀಕ್ಷೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಸರಕಾರ ಯಥಾಸ್ಥಿತಿ ಕಾಪಾಡುವಂತೆ ಹೊರಡಿಸಿದ ಆದೇಶ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ ನೇತೃತ್ವದಲ್ಲಿ ಮುಸ್ಲಿಮ್ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದರು. ಆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ ಎಂದರು. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಇದುವರೆಗೆ ಧಕ್ಕೆ ಬಂದಿಲ್ಲ. ಸ್ಕಾರ್ಫ್ ಹಾಕಲು ಒಂದು ಕಾಲೇಜಿನಲ್ಲಿ ಅವಕಾಶ ನೀಡಿದರೆ ಮುಂದೆ ಎಲ್ಲ ಕಾಲೇಜಿನಲ್ಲಿ ಇದು ಆರಂಭವಾಗುತ್ತದೆ. ಇದಕ್ಕೆ ಪ್ರತಿರೋಧವಾಗಿ ಕೇಸರಿ ಶಾಲು, ಕೇಸರಿ ಪೇಟ ಧರಿಸಿ ಬರುವುದು ಆರಂಭವಾಗುತ್ತದೆ. ಸಣ್ಣ ವಿಚಾರದಿಂದ ಸೌಹಾರ್ದತೆಗೆ ಧಕ್ಕೆಯಾಗದಂತೆ ಮುಖಂಡರಿಗೆ ಮನವಿ ಮಾಡಿದ್ದೇವೆ. ಅವರು ಪೋಷಕರೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ಮತ್ತೆ ನಮ್ಮನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.
ಪೋಷಕರನ್ನು ಪ್ರಾಂಶುಪಾಲರು ಕರೆದು, ಹಿಜಾಬ್ ಧರಿಸದೆ ತರಗತಿ ಬರುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಿಜಾಬ್ ಇಲ್ಲದೆ ಬರಲು ಒಪ್ಪದಿದ್ದರೆ ನಾವು ತರಗತಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಅವರಿಗೆ ಬೇಕಾದರೆ ಆನ್‌ಲೈನ್ ತರಗತಿ ಮಾಡಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು. ಮುಂದಿನ ವರ್ಷ ಯಾವ ಕಾಲೇಜಿಗೆ ಬೇಕಾದರೂ ಅವರು ಸೇರಬಹುದು. ಕಾಲೇಜಿನಲ್ಲಿ ಶಿಸ್ತು ಎಂಬುದು ಅಗತ್ಯ. ಕಾಲೇಜು ಮತ್ತು ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ತಿಳಿಹೇಳಿ ಹಿಂದೆ ಇದ್ದ ಪದ್ಧತಿ ಮುಂದುವರೆಸಲು ಅವಕಾಶ ಕಲ್ಪಿಸಬೇಕು. ನಾವು ಯಾವುದೇ ಕಾರಣಕ್ಕೂ ಆ ಪದ್ಧತಿಯನ್ನು ಬದಲಾಯಿಸುವುದಿಲ್ಲ ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದರು.
ವರದಿ ಆಧಾರದಲ್ಲಿ ಕ್ರಮ: ಸಚಿವ ಎಸ್. ಅಂಗಾರ :
ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಎಸ್ ಅಂಗಾರ, ಎಲ್ಲರ ಇಚ್ಚೆಗೆ ಬೇಕಾದಂತೆ ಸರಕಾರ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಸಮಾನತೆಯನ್ನು ಕಾಪಾಡಲು ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಪ. ಪೂ ಕಾಲೇಜು ವಸ್ತ್ರ ಸಂಹಿತೆ ಸಂಬಂಧಿಸಿ ಸರಕಾರ ಸಮಿತಿಯನ್ನು ರಚನೆ ಮಾಡಲಿದ್ದು, ಸಮಿತಿ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಸಚಿವರು ತಿಳಿಸಿದರು.