ಗಂಗಾವತಿ: ಐತಿಹಾಸಿಕ ಆನೆಗೊಂದಿ ಉತ್ಸವ ಮಾರ್ಚ್ 11, 12ರಂದು ಯೋಜನೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಉತ್ಸವ ನಡೆಸಲು ಈಗಾಗಲೇ ಐದು ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿ ಸಿದ್ಧತೆ ನಡೆಸಿದೆ.
ಈ ಮಧ್ಯೆ ಜಿಲ್ಲಾಡಳಿತದ ಯಡವಟ್ಟಿನಿಂದಾಗಿ ಆನೆಗೊಂದಿ ಉತ್ಸವದ ಪ್ರಚಾರ ಮಾಡುವ ಬ್ಯಾನರ್ ಗಳಲ್ಲಿ ಸ್ಥಳೀಯ ಶಾಸಕ ಹಾಗೂ ಕೆ.ಆರ್.ಪಿ ಪಕ್ಷದ ರಾಜ್ಯಾಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರ ಭಾವಚಿತ್ರವನ್ನು ಬಿಟ್ಟು ಬ್ಯಾನರ್ ಗಳನ್ನು ಮುದ್ರಣ ಮಾಡಿ ಜಿಲ್ಲೆಯ ವಿವಿಧಡೆ ಹಾಕಲಾಗಿದೆ.
ಆದರೆ ಆನೆಗೊಂದಿ ಉತ್ಸವದ ಬ್ಯಾನರ್ ಗಳಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಪೋಟೋ ಇಲ್ಲದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಫೋಟೋ ಬ್ಯಾನರ್ ಗಳಲ್ಲಿ ಮುದ್ರಿಸದೆ ಆನೆಗೊಂದಿ ಉತ್ಸವದ ಬ್ಯಾನರ್ ಗಳನ್ನು ಜಿಲ್ಲೆಯಲ್ಲಿ ಅಳವಡಿಸಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ಜನಾರ್ದನ ರೆಡ್ಡಿಯವರ ಫೋಟೋ ಇರುವ ಬ್ಯಾನರ್ ಗಳನ್ನು ಎಲ್ಲಾ ಕಡೆ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಮುದ್ರಣವಾಗದ ಆಹ್ವಾನ ಪತ್ರಿಕೆ: ಇತಿಹಾಸ ಪ್ರಸಿದ್ಧ ಆನೆಗೊಂದಿ ಉತ್ಸವ ಮಾರ್ಚ್ 11, 12ರಂದು ಆಯೋಜನೆಗೊಂಡಿದ್ದು, ಶನಿವಾರ ಸಂಜೆಯವರೆಗೂ ಉತ್ಸವದ ಆಹ್ವಾನ ಪತ್ರಿಕೆ ಮುದ್ರಣ ಮತ್ತು ಹಂಚಿಕೆಯಾಗದಿರುವುದು ಕುರಿತು ಮಾಹಿತಿ ದೊರಕಿದೆ.
ಎರಡು ದಿನಗಳ ಕಾಲ ಉತ್ಸವ ಜರಗಲಿದ್ದು, ಕಾರ್ಯಕ್ರಮದ ವಿವರ ಸೇರಿದಂತೆ ಉದ್ಘಾಟನೆ ಮತ್ತು ಸಮಾರೋಪಕ್ಕೆ ಅತಿಥಿ ಗಣ್ಯರು ಆಗಮಿಸುವ ಮಾಹಿತಿ ಸರಿಯಾಗಿ ದೊರಕಿಲ್ಲ ಮತ್ತು ಆನೆಗೊಂದಿ ರಾಜ ವಂಶಸ್ಥರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಣ ಮಾಡುವ ಕುರಿತು ಗೊಂದಲದಿಂದಾಗಿ ಆಹ್ವಾನ ಪತ್ರಿಕೆಗಳು ಇನ್ನೂ ಮುದ್ರಣಗೊಂಡಿಲ್ಲ ಎನ್ನಲಾಗುತ್ತಿದೆ.