Advertisement

MLA HD Revanna: ವರ್ಗಾವಣೆ ಆದರೂ ಮತ್ತೇಕೆ ಬಂದಿದ್ದು?

03:01 PM Nov 29, 2023 | Team Udayavani |

ಚನ್ನರಾಯಪಟ್ಟಣ: ಸರ್ಕಾರ ವರ್ಗಾವಣೆ ಮಾಡಿದ್ದರೂ ಹಣ ಕೊಟ್ಟು ಚನ್ನರಾಯಪಟ್ಟಣಕ್ಕೆ ಪುನಃ ಬಂದಿದ್ದೀಯ? ಇದು ನನಗೆ ಗೊತ್ತಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ತಹಶೀಲ್ದಾರ್‌ ಗೋವಿಂದರಾಜು ವಿರುದ್ಧ ಹರಿಹಾಯ್ದರು.

Advertisement

ತಾಲೂಕಿನ ದಂಡಿಗನಹಳ್ಳಿ ಹೋಬಳಿ ಆನೇಕೆರೆ ಗ್ರಾಮದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ: ವರ್ಗಾವಣೆ ಆದ ಮೇಲೆ ಮತ್ತೇಕೆ ಬಂದಿದ್ದು?, ನಿಮ್ಮ ಜತೆ ದಂಡಿಗನಹಳ್ಳಿ ಹೋಬಳಿ ಉಪತಹಶೀಲ್ದಾರ್‌ ಕೂಡ ಸೇರಿಕೊಂಡು ಅವರು ಸಹ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲವಾದರು. ನಿಮ್ಮಂತಹ ತಹಶೀಲ್ದಾರ್‌ಗಳು ಜವಾಬ್ದಾರಿ ಯಿಂದ ಕೆಲಸ ಮಾಡದೇ ಇರುವುದ ರಿಂದ ತಾಲೂಕಿನಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ.

ಪಿಡಿಒ ವಿರುದ್ಧ ಕೇಸ್‌ ದಾಖಲಿಸಿ: ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್‌ ಖರೀದಿ ಮಾಡಲಾಗಿದೆ. ಆದರೆ, ಗ್ರಾಪಂ ಕಚೇರಿಯಲ್ಲಿ ಕಂಪ್ಯೂಟರ್‌ ಇಲ್ಲ. ಖರೀದಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಆನೇಕರೆ ಗ್ರಾಪಂ ಪಿಡಿಒ ಅನುರಾಧರನ್ನು ತರಾಟೆಗೆ ತೆಗೆದುಕೊಂಡರು. ಆಕೆಯ ವಿರುದ್ಧ ಕ್ರಿಮಿನಲ್‌ ದೂರು ದಾಖಲು ಮಾಡಬೇಕು ಎಂದು ತಾಪಂ ಇಒ ಹರೀಶ್‌ಗೆ ತಾಕೀತು ಮಾಡಿದರು.

ಪಿಡಿಒ ಅನುರಾಧ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಿದ್ದರಿಂದ ಕಂಪ್ಯೂಟರ್‌ ಖರೀದಿ ಮಾಡಿದ್ದೇನೆ ಎಂದಾಗ ಕೋಪಗೊಂಡ ವಿಧಾನ ಪರಿಷತ್‌ ಸದಸ್ಯ ಸೂರಜ್‌, ಈಗ ಗ್ರಾಪಂಗೆ ಹೋಗೋಣ ಅಲ್ಲಿ ಕಂಪ್ಯೂಟರ್‌ ಇರಬೇಕೆಂದರದಲ್ಲದೆ, ಅಧ್ಯಕ್ಷರ ಒಪ್ಪಿಗೆ ಪಡೆಯದೆ ಪಂಚಾಯತಿಯಲ್ಲಿ ಎಲ್ಲವೂ ನಡೆಯುತ್ತಿವೆ ಎಂದು ತರಾಟೆ ತೆಗೆದುಕೊಂಡರು.

Advertisement

ಆಡಿಟ್‌ ಮಾಡಿಸಿ, ವಾರದಲ್ಲಿ ವರದಿ ಕೊಡಿ: ಇವರ ಮಾತಿಗೆ ಧ್ವನಿಗೂಡಿಸಿದ ಸಂಸದ ಪ್ರಜ್ವಲ್‌, ಗ್ರಾಮ ಪಂಚಾಯಿತಿ ಸಂಪೂರ್ಣ ಆಡಿಟ್‌ ಮಾಡಿಸಿ ಒಂದುವಾರದಲ್ಲಿ ಸಂಪೂರ್ಣ ವರದಿ ಇಒ ನೀಡಬೇಕು. ಅಕ್ರಮವಾಗಿದ್ದರೆ ಪಿಡಿಒ ತಲೆದಂಡ ಮಾಡಬೇಕೆಂದು ಆದೇಶಿಸಿದರು. ಶಾಸಕ ರೇವಣ್ಣ ಮಧ್ಯಪ್ರವೇಶಿಸಿ, ನಿಮ್ಮಗಳ ಆಟ ನನಗೆ ಗೊತ್ತಿದೆ. ಪಿಡಿಒಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ಗೊತ್ತಿದೆ. ಶೀಘ್ರದಲ್ಲಿ ಗ್ರಾಮಸಭೆ ಮಾಡಿ ಎಲ್ಲವನ್ನು ಸಾರ್ವಜನಿಕರಿಂದ ಕಲೆ ಹಾಕುತ್ತೇನೆ ಎಂದರು.

ನಿರಂತರ ಜ್ಯೋತಿ ವಿದ್ಯುತ್‌ ಪೂರೈಸಿ: ದಂಡಿಗನಹಳ್ಳಿ ಹೋಬಳಿ 85 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಈಗಾಗಲೇ ಶೇ.95 ರಷ್ಟು ಕಾಮಗಾರಿ ಮುಕ್ತಾಯ ಮಾಡಲಾಗಿದೆ. ಜೆಜೆಎಂ ಮೂಲಕ ಮಾಡಿಸಿರುವ ಕಾಮಗಾರಿಯಿಂದ ಎಲ್ಲಾ ಗ್ರಾಮಗಳಿಗೆ ಸರ್ವೀಸ್‌ ನೀಡಿ ಪ್ರತಿ ಮನೆ ಬಾಗಿಲಿಗೆ ಹೇಮಾವತಿ ನೀರು ಹರಿಸಬೇಕು. ಹೋಬಳಿಯ ಎಲ್ಲಾ ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್‌ ನೀಡಬೇಕು ಎಂದು ರೇವಣ್ಣ ಅವರು ಆದೇಶಿಸಿದರು.

ಆನೇಕೆರೆ ಗ್ರಾಮಕ್ಕೆ ಕಳೆದ ಒಂದುವರೆ ವರ್ಷದಿಂದ ನೀರುಘಂಟಿ ಇಲ್ಲದೆ ಸಾರ್ವಜನಿಕರು ಪರದಾಟುತ್ತಿದ್ದಾರೆ, ಹಲವು ಸಲ ಮನವಿ ಮಾಡಿದರು ಪಿಡಿಒ ಮಾತ್ರ ಸ್ಪಂದಿಸುತ್ತಿಲ್ಲ, 45 ಲಕ್ಷ ವೆಚ್ಚ ಮಾಡಿ ಬಿದಿ ದೀಪ ಖರೀದಿ ಮಾಡಿದ್ಧಾರೆ ಆದರೆ ಒಂದು ತಿಂಗಳಲ್ಲಿ ಎಲ್ಲ ಬೀದಿ ದೀಪಗಳು ಹಾಳಾಗಿವೆ ದಯಮಾಡಿ ಸಂಸದರು ಈ ಬಗ್ಗೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ತಲೆದಂಡ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಜಯಮ್ಮ, ರಂಗನಾಥ, ತಹಸೀಲ್ದಾರ್‌ ಗೋವಿಂದರಾಜು, ಇಒ ಹರೀಶ್‌, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲಾ ಗ್ರಾಮಗಳಲ್ಲಿ ಸಮಸ್ಯೆ, ಪಿಡಿಒ ಮೇಲೆ ದೂರು: ಜನರ ಸಮಸ್ಯೆ ಆಲಿಸಿದ ಬಳಿಕ ಸಂಸದ ಪ್ರಜ್ವಲ್‌ ಮಾತನಾಡಿ, ಆನೆಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಸಮಸ್ಯೆಯಿದ್ದು, ಎಲ್ಲರೂ ಪಿಡಿಒ ಮೇಲೆ ದೂರು ಹೇಳುತ್ತಿರುವುದು ನೋಡಿದರೆ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತಿಲ್ಲ ಎನ್ನುವುದು ಸಾಭೀತಾಗುತ್ತಿದೆ. ಇಂತಹ ಅಧಿಕಾರಿಗಳಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ತಾಪಂ ಇಒ ಕೂಡಲೇ ಈಕೆ (ಪಿಡಿಒ) ಕರ್ತವ್ಯದ ಬಗ್ಗೆ ತನಿಖೆ ಮಾಡಿ, ಸರಿಯಾಗಿ ಸೇವೆ ಮಾಡದೆ ಹೋದರೆ ಅಮಾನತು ಮಾಡಬೇಕೆಂದು ತಾಕೀತು ಮಾಡಿದರು.

ಕೇಂದ್ರ ಸರ್ಕಾರ ಸಮರ್ಪಕವಾಗಿ ಪಡಿತರ ಆಹಾರ ವಿತರಣೆ ಮಾಡಿದರೂ ರಾಜ್ಯ ಸರ್ಕಾರ 3 ಕಿಲೋ ರಾಗಿ ನೀಡುತ್ತಿದ್ದು, ಅದರಲ್ಲಿ ಒಂದು ಕಿಲೋ ಮಣ್ಣು ಬೆರೆಸಲಾಗುತ್ತಿದೆ. ಬಡವರ ಪಡಿತರಕ್ಕೆ ಮಣ್ಣು ಹಾಕುವ ಮೂಲಕ ಗ್ಯಾರಂಟಿ ಯೋಜನೆ ನೀಡುತ್ತಿದೆ.-ಎಚ್‌.ಡಿ.ರೇವಣ್ಣ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next