ಬೆಂಗಳೂರು: ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಅವರು ಅವಹೇಳನಕಾರಿ ಮಾತುಗಳನ್ನಾಡಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿದ ಘಟನೆ ಬುಧವಾರ(ಫೆ.17, 2021) ನಡೆದಿದೆ.
ಏನಿದು ಘಟನೆ:ದೊಮ್ಮಲೂರಿನಲ್ಲಿ ಕಾಮಗಾರಿ ವೀಕ್ಷಣೆಗೆ ತೆರಳಿದ ವೇಳೆ ತನ್ನ ಸಂಗಡಿಗರೊಂದಿಗೆ ಮಾತಾಡಿದ್ದ ಹ್ಯಾರಿಸ್, ರೋಡಲ್ಲಿ ಪ್ರತಿಮೆ ಯಾಕೆ ಇಡ್ತಾರೆ. ರಾಜಕುಮಾರ ಪ್ರತಿಮೆ ಇಡೋದೆ ದೊಡ್ಡ ಕಥೆ, ಪ್ರತಿಮೆಗೆ ಪ್ರೊಟೆಕ್ಷನ್ ಬೇಕು ಅಂದ್ರ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ಮಾತುಗಳನ್ನಾಡಿದ್ದಾರೆ.
ರಾಜ್ ಕುಮಾರ್ ಪ್ರತಿಮೆ ವಿಚಾರಕ್ಕೆ ನಾಲಿಗೆ ಹರಿಬಿಟ್ಟ ಹ್ಯಾರಿಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹ್ಯಾರಿಸ್ ವಿರುದ್ಧ ಅಣ್ಣಾವ್ರ ಅಭಿಮಾನಿಗಳು ಹರಿಹಾಯುತ್ತಿದ್ದಾರೆ. ಹ್ಯಾರಿಸ್ ಅವರೇ ಅಣ್ಣಾವ್ರು ಕರ್ನಾಟಕ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಬಾರದು ಅಂತ ಹೇಳುವ ನೈತಿಕತೆ ನಿಮಗೂ ಸೇರಿ ಇಲ್ಲಿ ಯಾರಿಗೂ ಇಲ್ಲ. ನಾವು ಎಲ್ಲಿ ಬೇಕಾದರೂ ಪ್ರತಿಷ್ಠಾಪನೆ ಮಾಡುತ್ತೇವೆ, ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಹ್ಯಾರಿಸ್ ಅವರನ್ನು ರಾಜ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ಹ್ಯಾರಿಸ್, ರಾಜಕುಮಾರ್ ಅವರು ಎಲ್ಲರಿಗೂ ಅಣ್ಣಾವ್ರು . ಇವರ ಬಗ್ಗೆ ಯಾರಾದ್ರೂ ಮಾತಾಡ್ತಾರಾ ? ಸುಮ್ಮನೆ ನನ್ನ ವಿರುದ್ಧ ಯಾರೋ ಆಗದವರು ಕಟ್ ಆ್ಯಂಡ್ ಪೇಸ್ಟ್ ಮಾಡಿ ಹಾಕ್ತಿದ್ದಾರೆ. ದಯವಿಟ್ಟು ಯಾರೂ ಹೀಗೆ ಮಾಡಬೇಡಿ. ರಾಜಕುಮಾರ್ ಅವರ ಪರವಾಗಿ ಏನ ಬೇಕಾದರೂ ಮಾಡ್ತೀನಿ ಎಂದಿದ್ದಾರೆ.