ಸಾಗರ: ಗಂಡ ದುಬೈನಲ್ಲಿದ್ದಾನೆ, ಹೆಂಡತಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಾವು ಆವಿನಹಳ್ಳಿಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ ಎಂದು ೩ ಎಕರೆ ಜಮೀನು ಮಂಜೂರಿಗೆ ಬಗರ್‌ಹುಕುಂ ಅಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಗಮನ ಸೆಳೆದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆವಿನಹಳ್ಳಿಯಲ್ಲಿ ಸಾಗುವಳಿ ಮಾಡದೆ ಇದ್ದವರು ಸಹ ಬಗರ್‌ಹುಕುಂ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಪ್ರಕರಣಗಳಿಂದ ನಿಜವಾಗಿಯೂ ಕೃಷಿ ನಡೆಸುತ್ತಿರುವ ರೈತರಿಗೆ ಅನ್ಯಾಯವಾಗುತ್ತದೆ. ಇಂತಹದ್ದಕ್ಕೆಲ್ಲ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಘೋಷಿಸಿದರು.
ತಾಲೂಕಿನ 28 ರೈತರಿಗೆ ಶೀಘ್ರದಲ್ಲಿ ಸ್ಥಳ ಪರಿಶೀಲನೆ ನಡೆಸಿ ಹಕ್ಕುಪತ್ರ ನೀಡಲಾಗುತ್ತದೆ. ಜಮೀನು ಮಂಜೂರಾದ ರೈತರ ಜಮೀನುಗಳಿಗೆ ಇಂದಿನಿಂದಲೇ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸುಮಾರು 3 ಲಕ್ಷ ಹೆಕ್ಟೇರ್ ಸಿ ಎಂಡ್ ಡಿ ಲ್ಯಾಂಡ್ ಇದ್ದು ಅದನ್ನು ಬಿಡಿಸಿ ಅರ್ಜಿ ಸಲ್ಲಿಸಿದ ರೈತರಿಗೆ ನೀಡುವ ನಿಟ್ಟಿನಲ್ಲಿ ಕಂದಾಯ ಸಚಿವರು, ಅರಣ್ಯ ಸಚಿವರು ಮತ್ತು ಗೃಹ ಸಚಿವರ ಜೊತೆ ಸದ್ಯದಲ್ಲಿ ಸಭೆ ಕರೆಯಲಾಗುತ್ತದೆ. ಈಗಾಗಲೆ ಕಂದಾಯ ಮತ್ತು ಅರಣ್ಯ ಸಚಿವರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು.
ಬಗರ್‌ಹುಕುಂ ಕಾಯ್ದೆಯಡಿ ಫಾರಂ ನಂ. 53 ಮತ್ತು 57 ಅಡಿ ಅರ್ಜಿ ಸಲ್ಲಿಸಿದ ಅರ್ಹರಿಗೆ ಜಮೀನು ಮಂಜೂರಾತಿಗೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮೀಸಲು ಅರಣ್ಯದ ನೋಟಿಸ್ ನೀಡಿ ತಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎನ್ನುವ ಭಯ ರೈತರಿಗೆ ಬೇಡ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಜೊತೆಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಸಂಬಂಧ ಸಹ ಸದ್ಯದಲ್ಲಿಯೆ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.
ಬಗರ್‌ಹುಕುಂ ಸಮಿತಿ ಸದಸ್ಯರಾದ ಆರ್.ಎಸ್.ಗಿರಿ, ರೇವಪ್ಪ ಕೆ.ಹೊಸಕೊಪ್ಪ, ಗಂಗಮ್ಮ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಗ್ರೇಡ್-೨ ತಹಶೀಲ್ದಾರ್ ಪರಮೇಶ್ವರ ಟಿ. ಇನ್ನಿತರರು ಹಾಜರಿದ್ದರು.