ಸಾಗರ: ಉಳ್ಳೂರಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ದೊಡ್ಡ ಪ್ರಮಾಣದಲ್ಲಿ ಸೋರಿಕೆ ಆಗಿ ಇದರೊಳಗೆ ಮಕ್ಕಳು ಉಳಿಯಲಾಗದ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಲವಂತದ ರಜೆ ನೀಡಿ ಮನೆಗೆ ಕಳುಹಿಸಿರುವುದರ ಸಂಬಂಧ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಶುಕ್ರವಾರ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಪತ್ರಿಕೆ ಹಾಗೂ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಶನಿವಾರ ಜಿಲ್ಲಾಧಿಕಾರಿಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸ್ಥಳದ ಪರಿಶೀಲನೆ ನಡೆಸಿ, ಉಳ್ಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಮಳೆಯಿಂದ ಸೋರುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ೧.೫೦ ಲಕ್ಷ ರೂ. ವೆಚ್ಚದಲ್ಲಿ ರಿಪೇರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೈಶಾಲಿ, ತಹಶೀಲ್ದಾರ್ ಮಲ್ಲೇಶ್ ಪೂಜಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಪುಷ್ಪಾ ಕೆಂಬಾವಿಮಠ ಇನ್ನಿತರರು ಹಾಜರಿದ್ದರು.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಮಲಗುವ ಸ್ಥಳ, ಅಡುಗೆ ಮನೆಯಲ್ಲಿಯೂ ದೊಡ್ಡ ಪ್ರಮಾಣದ ಸೋರಿಕೆ ಇದೆ. ಇಂತಹ ಸಂದರ್ಭದಲ್ಲಿ ಸೋರಿಕೆಯನ್ನು ತಡೆಯಲು ತಕ್ಷಣದ ಕ್ರಮಕ್ಕೆ ಆಡಳಿತ, ಶಾಸಕರು ಮುಂದಾಗಬೇಕಿತ್ತು. ಅದರ ಬದಲು ಮಕ್ಕಳನ್ನೇ ಮನೆಗೆ ಕಳುಹಿಸಲಾಗಿದೆ ಇಲ್ಲಿನ ಕಬ್ಬಿಣದ ಮಂಚಗಳಿಗೆ ವಿದ್ಯುತ್ ಶಾರ್ಟ್ ಆಗುವ ಸಾಧ್ಯತೆಗಳಿವೆ. ಇದನ್ನು ಗಮನಿಸದಿರುವ ಸರ್ಕಾರ ಸತ್ತಿದೆಯೇ ಎಂಬ ಅನುಮಾನ ಕಾಡುತ್ತದೆ ಎಂದು ಬೇಳೂರು ಹರಿಹಾಯ್ದಿದ್ದರು.
ಬೇಳೂರು ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ಶಾಸಕ ಹಾಲಪ್ಪ ಸಾಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಟ್ಟಡವನ್ನು ನಾನೇನೂ ಕಟ್ಟಿಸಿದ್ದಲ್ಲ. ಈ ಮಾವ ಅಳಿಯನೇ ಕಟ್ಟಿಸಿದ್ದು. ಕೆಲವರು ಜ್ಞಾನ ಕಡಿಮೆಯಾಗಿ ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.