Advertisement

ಲಾಂಚ್‌- ಸೇತುವೆ ನಿರ್ಮಾಣ ಕೆಲಸಕ್ಕೆ ಆದ್ಯತೆ: ಶಾಸಕ ಹಾಲಪ್ಪ

04:41 PM Feb 28, 2021 | Ganesh Hiremath |

ಸಾಗರ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜನ್ಮದಿನವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಿದ್ದಾರೆ. ನಾವು ಸಂತ್ರಸ್ತ ಜನರಿಗೆ ಲಾಂಚ್‌ ಮೂಲಕ ಸಂಪರ್ಕ ಕಲ್ಪಿಸಿ, ಅವರ ಹೆಸರಿನಲ್ಲಿ ಈ ದಿನ ಹೊಸ ಲಾಂಚ್‌ ಸೇವೆ ಪ್ರಾರಂಭಿಸಲಾಗಿದೆ ಎಂದು ಎಂಎಸ್‌ ಐಎಲ್‌ ಅಧ್ಯಕ್ಷ ಹಾಗೂ ಶಾಸಕ ಎಚ್‌. ಹಾಲಪ್ಪ ಹರತಾಳು ತಿಳಿಸಿದರು.

Advertisement

ತಾಲೂಕಿನ ಚನ್ನಗೊಂಡ ಗ್ರಾಪಂ ವ್ಯಾಪ್ತಿಯ ಶರಾವತಿ ಹಿನ್ನೀರಿನ ಎಣ್ಣೆಹೊಳೆಯ ಶಿಗ್ಗಲು-ಕೋಗಾರು ಲಾಂಚ್‌ ಸೇವೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ತರ ಕಷ್ಟ ಅನುಭವಿಸಿದವರಿಗೆ ಗೊತ್ತು. ಸಂತ್ರಸ್ತ ಜನರ ನೋವಿಗೆ ಸ್ಪಂದಿಸಬೇಕು ಎನ್ನುವ ಮಹದಾಸೆಯಿಂದ ಹಿನ್ನೀರಿನಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಲಾಂಚ್‌ ಹಾಗೂ ಸೇತುವೆ ನಿರ್ಮಾಣದ ಕೆಲಸಕ್ಕೆ ಒತ್ತು ನೀಡುತ್ತಿರುವುದಾಗಿ ತಿಳಿಸಿದರು.

ಗ್ರಾಮಸ್ಥರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಅವರಿಗೆ ಸಂಚಾರ ವ್ಯವಸ್ಥೆ ಸುಲಭವಾಗಲಿ ಎನ್ನುವ ಉದ್ದೇಶದಿಂದ ಹಿನ್ನೀರಿನ ಭಾಗಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ಒಂದು ಗ್ರಾಮದವರು ಮತ್ತೂಂದು ಗ್ರಾಮಕ್ಕೆ ಸುಮಾರು 40 ಕಿಮೀ ಕ್ರಮಿಸಬೇಕಾಗಿತ್ತು. ಈ ಭಾಗದಲ್ಲಿ ಲಾಂಚ್‌ ಸೇವೆ ಕಲ್ಪಿಸಿ ಎನ್ನುವ ಸಾರ್ವಜನಿಕರ ಒತ್ತಾಯದ ಮೇರೆಗೆ ಹೊಸ ಲಾಂಚ್‌ ಬಿಡಲಾಗಿದ್ದು, ಕೇವಲ ಮೂರು ಕಿಮೀನಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಂಚರಿಸಲು ಸಾಧ್ಯವಾಗಿದೆ. ಸದ್ಯದಲ್ಲೇ ಈ ಲಾಂಚ್‌ ನಿಲ್ಲುವ ಸ್ಥಳಕ್ಕೆ ರಸ್ತೆ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಶರಾವತಿ ಹಿನ್ನೀರು ಪ್ರದೇಶದಲ್ಲಿ ಇನ್ನಷ್ಟು ಲಾಂಚ್‌ ವ್ಯವಸ್ಥೆ ಅಗತ್ಯವಿದೆ. ಜಡ್ಡಿನಬೈಲು-ಕಿರುತೊಡೆ ಮೂಲಕ ಇನ್ನೊಂದು ಲಾಂಚ್‌ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅದಕ್ಕೆ ಅವರು ಲಾಂಚ್‌ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಅಗತ್ಯ ಇರುವ ಕಡೆಗಳಲ್ಲಿ ಇನ್ನಷ್ಟು ಲಾಂಚ್‌ ಸೇವೆ ಒದಗಿಸಲು ಸಹ  ಪ್ರಯತ್ನ ನಡೆಸಲಾಗುತ್ತದೆ ಎಂದರು.

ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಶಾಸಕರು ಈಡೇರಿಸುವ ಮೂಲಕಜನರ ಸಮಸ್ಯೆ ಬಗೆಹರಿಸಿದ್ದಾರೆ. ಶಿಗ್ಗಲು ಮತ್ತು ಕೋಗಾರು ಭಾಗದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ತೂಗುಸೇತುವೆ ನಿರ್ಮಾಣದ ಬಗ್ಗೆ ಒತ್ತಾಯ ಮಾಡಲಾಗಿತ್ತು.

Advertisement

ಜನರ ಸಾರಿಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನೂತನ ಲಾಂಚ್‌ ಸೇವೆ ಕಲ್ಪಿಸುವ ಮೂಲಕ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಶಾಸಕರು ತೋರಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ತಾಪಂ ಸದಸ್ಯೆ ಪ್ರಭಾವತಿ ಚಂದ್ರಕಾಂತ್‌ ಮಾತನಾಡಿದರು. ಚನ್ನಗೊಂಡ ಗ್ರಾಪಂ ಅಧ್ಯಕ್ಷ ಪದ್ಮರಾಜ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪವಿತ್ರಾ, ಕಾರ್ಗಲ್‌ ಪಪಂ ಅಧ್ಯಕ್ಷೆ ವಾಸಂತಿ ರಮೇಶ್‌, ಉಪಾಧ್ಯಕ್ಷ ಮಂಜುನಾಥ ಪಿ., ಪ್ರಮುಖರಾದ ಮಂಜಯ್ಯ ಜೈನ್‌, ವಾಟೆಮಕ್ಕಿ ನಾಗರಾಜ್‌, ಓಂಕಾರ್‌ ಜೈನ್‌, ನೇಮಿರಾಜ್‌, ಸೋಮರಾಜ್‌ ಕೋಮನಕುರಿ, ಬಂದರು ಮತ್ತು ಒಳನಾಡು ಇಲಾಖೆಯ ವಿ.ಆರ್‌. ನಾಯಕ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next