ಕೂಡ್ಲಿಗಿ : ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಿಂದ ಬರುವ ಹಣವನ್ನು ಆಯಾ ಇಲಾಖೆಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಮುಂದಾಗಬೇಕು. ಕೆಲಸ ಮಾಡಲು ಇಚ್ಛಾಶಕ್ತಿ ಇಲ್ಲವೋ ಅಂತವರಿಗೆ ಮುಲಾಜಿಲ್ಲದೇ ಮಾರ್ಚ್‌ಗೆ ವರ್ಗಾವಣೆ ದಾರಿ ತೋರಿಸುವೆ ಎಂದು ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಅಧಿ ಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಹಣವನ್ನು ಶಾಲಾ ಅಭಿವೃದ್ಧಿಗೆ, ರೈತರ ಜಮೀನುಗಳ ಅಭಿವೃದ್ಧಿಗೆ, ಅರಣ್ಯದಲ್ಲಿ ಚೆಕ್ ಡ್ಯಾಂ ನಿರ್ಮಿಸಲು, ತೋಟಗಾರಿಕೆ ಮಾಡಲು ಸೇರಿದಂತೆ ರೈತರಿಗೆ ಅನುಕೂಲವಾಗುವ ಯೋಜನೆಗಳಿಗೆ ಬಳಸಬಹುದಾಗಿದೆ ಎಂದರು.
ತಹಶೀಲ್ದಾರ್ ಎಸ್. ಮಹಾಬಲೇಶ್ವರ ಅವರು ಮಾತನಾಡಿ, ಹೊಸಹಳ್ಳಿ ಹೋಬಳಿಯ ಲೋಕಿಕೆರೆ ಗ್ರಾಮವನ್ನು ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದಾಗ ಶಾಸಕರು ಮಾತನಾಡಿ ನಾನು ನಿಮ್ಮ ಜೊತೆ ವಾಸ್ತವ್ಯ ಹೂಡುತ್ತೇನೆ ಅಲ್ಲಿಯೇ ಇದ್ದು ಜನರ ಸಮಸ್ಯೆಗಳನ್ನು ಪರಿಹರಿಸೋಣ. ಅಧಿಕಾರಿಗಳು ಗೈರಾದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳುವುದಾಗಿ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಸರ್ಕಾರಿ ಶಾಲೆಗಳ ಕಾಂಪೌಂಡ್ ನಿರ್ಮಾಣ ಮಾಡಲು ಉದ್ಯೋಗ ಖಾತ್ರಿಯಲ್ಲಿ ಸಾಕಷ್ಟು ಹಣ ಇದೆ. ನೀವು ಏಕೆ ಇನ್ನೂ ಆ ಹಣ ಬಳಸಿಕೊಂಡು ಕಾಂಪೌಂಡ್ ನಿರ್ಮಿಸಿಲ್ಲ ಎಂದು ಶಾಸಕರು ಬಿಇಓ ಉಮಾದೇವಿಯವರನ್ನು ಪ್ರಶ್ನಿಸಿದರು. ಆಗ ಬಿಇಒ ಅವರು ಮಾತನಾಡಿ, ನಾನು ಈಗಾಗಲೇ ಆಯಾ ಗ್ರಾಮ ಪಂಚಾಯ್ತಿ ಸದಸ್ಯರ ಜೊತೆ ಮಾತನಾಡಿದ್ದೇನೆ ಮುಂದಿನ ದಿನಗಳಲ್ಲಿ ಕಂಪೌಂಡ್ ನಿರ್ಮಿಸಲು ಮುಂದಾಗುತ್ತೇವೆ ಎಂದಾಗ, ಉದ್ಯೋಗ ಖಾತ್ರಿ ಕಾಮಗಾರಿ ಗ್ರಾಮ ಪಂಚಾಯ್ತಿ ಸದಸ್ಯರು ನಿಮಗೆ ನೀಡುತ್ತಾರಾ? ಅವರೇ ನೀಡುವುದಾದರೆ ಪಿಡಿಒ, ಇಒ, ಉದ್ಯೋಗಖಾತ್ರಿ ಅಧಿ ಕಾರಿಗಳು ಯಾಕಿರಬೇಕು? ಮೊದಲು ಆಯಾ ಗ್ರಾಮ ಪಂಚಾಯ್ತಿ ಪಿಡಿಒ, ಇಓ ಅವರ ಜೊತೆ ಚರ್ಚಿಸಿ ತಾಲೂಕಿನ ಎಲ್ಲ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿಕೊಳ್ಳಿ ಎಂದು ಶಾಸಕರು ಸೂಚಿಸಿದರು.
ಬೇಸಿಗೆ ಬಂತು ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.