ಬೆಂಗಳೂರು: ಅಮೆರಿಕದ ಕೆಂಟಕಿಯ ಲೂಯಿಸ್ ವಿಲ್ಲೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ರಾಜ್ಯದ 10 ಶಾಸಕರು ಭಾಗವಹಿಸಿದ್ದಾರೆ.
ವಿಶ್ವದಾದ್ಯಂತ ಸುಮಾರು 5,600 ಜನಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. 3 ದಿನಗಳ ಈ ಮಹತ್ವದ ಸಮ್ಮೇಳನದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಮಂಡಲದ ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಸಲೀಂ ಅಹಮದ್, ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ ಭಂಡಾರಿ ಸೇರಿ 10 ಶಾಸಕರು ಭಾಗ
ವಹಿಸಿದ್ದಾರೆ. ಆಗಸ್ಟ್ 7ರಂದು ಸಮ್ಮೇಳನಕ್ಕೆ ತೆರೆಬೀಳಲಿದೆ.
ಇದೇ ವೇಳೆ ರಾಷ್ಟ್ರೀಯ ಶಾಸಕರ ಸಮಾವೇಶ (ಎನ್‌ಎಲ್‌ಸಿ) ಮತ್ತು ರಾಜ್ಯ ಶಾಸಕಾಂಗಗಳ ರಾಷ್ಟ್ರೀಯ ಸಮ್ಮೇಳನದ (ಎನ್‌ಸಿಎಸ್‌ಎಲ್) ಸಹಯೋಗದಲ್ಲಿ ಶಾಸಕರ ದುಂಡುಮೇಜಿನ ಸಭೆ ನಡೆಯಲಿದೆ. ಇದರಲ್ಲಿ ಶಾಸಕರ ಪ್ರಮುಖ ಸಮಸ್ಯೆಗಳು, ರಾಜ್ಯ ಹಣಕಾಸು, ಅಭಿವೃದ್ಧಿ ಸವಾಲುಗಳು, ಒಂದು ದೇಶ ಒಂದು ಚುನಾವಣೆ, ನಾಗರಿಕ ಸಂಹಿತೆ ಒಳಗೊಂಡಂತೆ ಮಹತ್ವದ ವಿಷಯಗಳ ಕಾರ್ಯಸೂಚಿ ರೂಪಿಸಲಾಗುತ್ತದೆ. ಸಾರ್ವಜನಿಕ ನೀತಿ, ತಜ್ಞರಿಂದ ಅಮೂಲ್ಯವಾದ ಒಳನೋಟಗಳು, ಹೊಸ ಕೌಶಲಗಳ ಅಭಿವೃದ್ಧಿ, ರಾಜಕೀಯ ಸವಾಲುಗಳು ಮತ್ತಿತರ ಅಂಶಗಳು ಚರ್ಚೆ ಆಗಿವೆ.