Advertisement

ಶಾಸಕ ಭರತ್‌ ಶೆಟ್ಟಿ ದಿಢೀರ್‌ ಭೇಟಿ; ಪರಿಶೀಲನೆ

02:55 AM Jul 26, 2018 | Karthik A |

ಸುರತ್ಕಲ್‌ : 28 ಗ್ರಾಮಗಳ ಕೆಲಸಕ್ಕೆ ಒಂದು ಕಂಪ್ಯೂಟರ್‌, ಓರ್ವ ಆಪರೇಟರ್‌, ಆಗಾಗ ಕೈ ಕೊಡುವ ನೆಟ್‌ವರ್ಕ್‌ ಸಾಲುಗಟ್ಟಿ ನಿಂತ ಸಾರ್ವಜನಿಕರು. ಇದು ಬುಧವಾರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ನಾಡಕಚೇರಿಯ ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಕಂಡು ಬಂದ ದೃಶ್ಯ. ಸಾರ್ವಜನಿಕರ ದೂರಿನ ಮೇರೆಗೆ ಭೇಟಿ ನೀಡಿದ ಶಾಸಕರು ಸಮಸ್ಯೆ ಕುರಿತಾಗಿ ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ಸಿಬಂದಿ ಕೊರತೆಯಿಂದ ಗ್ರಾಮಕರಣಿಕರೇ ಕೂತು ಸಾರ್ವಜನಿಕರಿಗೆ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಕೊಡಬೇಕಾದ ಸ್ಥಿತಿಯಿದೆ. ಇರುವ ಒಂದು ಕಂಪ್ಯೂಟರ್‌ನಲ್ಲೇ 28 ಗ್ರಾಮಗಳ ಜನರಿಗೆ ಸೇವೆ ನೀಡಬೇಕಾಗಿದೆ. ಆಗಾಗ ಅಂತರ್ಜಾಲ ಕೈ ಕೊಡುವುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಹೋಗುವ ಸ್ಥಿತಿ ಇದೆ ಎಂದು ಪ್ರಮಾಣ ಪತ್ರ ಪಡೆಯಲು ಬಂದ ಸಾರ್ವಜನಿಕರೊಬ್ಬರು ಶಾಸಕರಿಗೆ ದೂರಿದರು. ತತ್‌ ಕ್ಷಣ ಕಂದಾಯ ಅಧಿಕಾರಿ ನವೀನ್‌ ಜತೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಿದರು. ಇದೇ ಸಂದರ್ಭ ನಾಡ ಕಚೇರಿ ಸ್ಥಳಾಂತರವಾಗುವ ಕಟ್ಟಡವನ್ನು ವೀಕ್ಷಿಸಿದರು.

Advertisement

ಮುಂದುವರಿದ ಮಂಗಳೂರು ವನ್‌ ಸಿಬಂದಿ ಸಮಸ್ಯೆ
ಸುರತ್ಕಲ್‌ ಮಂಗಳೂರು ವನ್‌ ಕೇಂದ್ರದಲ್ಲಿ ಅವ್ಯವಸ್ಥೆ ಮುಂದುವರಿದಿದ್ದು ಸಿಬಂದಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ಕಟ್ಟಡ ಸೋರುವ ಸ್ಥಿತಿಯಿದೆ. ವೇತನ ಬೇಡಿಕೆ ಮಂಡಿಸಿದ ಮಂಗಳೂರು ವನ್‌ ಸಿಬಂದಿ ಪೈಕಿ ಐವರನ್ನು ವಜಾ ಮಾಡಿದ್ದು ಸುರತ್ಕಲ್‌ ಮಹಿಳಾ ಸಿಬಂದಿಯೋರ್ವರಿಗೆ ಹಿಂಬಡ್ತಿ ನೀಡಲಾಗಿದೆ. ಈ ಬಗ್ಗೆ ಶಾಸಕರಲ್ಲಿ ದೂರಿಕೊಂಡ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಕಾರ್ಮಿಕ ಅಧಿ ಕಾರಿಗೆ ದೂರವಾಣಿ ಕರೆ ಮಾಡಿ ಸುರತ್ಕಲ್‌ ಕಚೇರಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭ ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ಕಾರ್ಪೊರೇಟರ್‌ಗಳಾದ ಗುಣಶೇಖರ ಶೆಟ್ಟಿ, ಸುಮಿತ್ರಾ ಕರಿಯಾ, ಬಿಜೆಪಿ ಮುಖಂಡರಾದ ವಸಂತ್‌ ಹೊಸಬೆಟ್ಟು, ಭರತ್‌ರಾಜ್‌ ಕೃಷ್ಣಾಪುರ, ಶಿವರಾಮ್‌ ಗುಡ್ಡೆಕೊಪ್ಲ, ಜಯಂತ್‌ ಸಾಲ್ಯಾನ್‌, ವಿಠ್ಠಲ ಸಾಲ್ಯಾನ್‌, ಉಮೇಶ್‌ ದೇವಾಡಿಗ ಮೊದಲಾದವರು  ಉಪಸ್ಥಿತರಿದ್ದರು.

ಸಮಸ್ಯೆಗಳಿಗೆ ಶೀಘ್ರ ಪರಿಹಾರ
ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಕಂಪ್ಯೂಟರ್‌, ಓರ್ವ ಆಪರೇಟರ್‌ ನೇಮಕಕ್ಕೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಇನ್ನೂ ಮಾದರಿಯಾಗಿ ಇರಬೇಕಾದ ಸಂಸ್ಥೆ ಮಂಗಳೂರು ವನ್‌ ಸರಕಾರಿ ಅಧೀನದಲ್ಲಿರುವ ಹೊರಗುತ್ತಿಗೆ ಸಂಸ್ಥೆಯಾಗಿದ್ದು ಇಲ್ಲಿಯೇ ಸಿಬಂದಿಗೆ ಅನ್ಯಾಯವಾಗುತ್ತಿದೆ. ಕಡಿಮೆ ವೇತನ ನೀಡುತ್ತಿರುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸಚಿವರಲ್ಲಿ ಮಾತನಾಡಿ ಸಿಬಂದಿ ಸಮಸ್ಯೆಗಳಿಗೆ ಗಮನಹರಿಸಲಿದ್ದೇನೆ. 
– ಡಾ| ವೈ. ಭರತ್‌ ಶೆಟ್ಟಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next