ವಿಜಯಪುರ: ಈಗಾಗಲೇ ಹೇಳಿದಂತೆ ಸಂಕ್ರಾಂತಿ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದ್ದು, ಜ.20 ರೊಳಗೆ ಸಚಿವ ಸ್ಥಾನದ ಅವಕಾಶ ವಂಚಿತ ಎಲ್ಲ ಜಿಲ್ಲೆಗಳಿಗೂ ಆದ್ಯತೆ ಸಿಗಲಿದೆ. ಈ ತಿಂಗಳ 8 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಭೈಟಕ್‍ನಲ್ಲಿ ಈ ಬಗ್ಗೆ ನಿರ್ಧಾರ ಆಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪುನರುಚ್ಚರಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರಾಚನೆ ಸಂದರ್ಭದಲ್ಲಿ ಪಕ್ಷದ ಸರ್ಕಾರಕ್ಕೆ ವರ್ಚಸ್ಸು ತರುವ ರೀತಿಯಲ್ಲಿ ಹೆಚ್ಚು ಕ್ರಿಯಾಶೀಲತೆ ಹೊಂದಿದವರನ್ನು ಸಚಿವರನ್ನಾಗಿ ಮಾಡಬೇಕು. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ವಿಜಯಪುರ ಜಿಲ್ಲೆಗೆ ಸೂಕ್ತ ಹಾಗೂ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಸಂವಿಧಾನವನ್ನೇ ಗೌರವಿಸದ ಕಾಂಗ್ರೆಸ್ಸಿಗರದು ಗೂಂಡಾಗಳ ಪಕ್ಷ: ನಳಿನ್‍ಕುಮಾರ್ ಕಟೀಲ್ ಖಂಡನೆ
ಸಚಿವ ಸ್ಥಾನಕ್ಕಾಗಿ ನಾನು ಹೈಕಮಾಂಡ್‍ನ ಯಾವ ನಾಯಕರನ್ನೂ ನಾನು ಭೇಟಿ ಮಾಡುವುದಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಯಾರ ಮನೆಗೂ ಅಲೆಯುವುದಿಲ್ಲ, ಪಕ್ಷದಲ್ಲಿ ಅಂಥದ್ದಕ್ಕೆಲ್ಲ ಅವಕಾಶವಿಲ್ಲ. ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಎಲ್ಲರ ಲೆಕ್ಕವಿದೆ ಎಂದರು.
ಯಾರ ಯಾರ ಅರ್ಹತೆ ಎಷ್ಟಿದೆ, ಯೋಗ್ಯತೆ ಏನಿದೆ ಎಂಬುದು ಕೇಂದ್ರದ ವರಿಷ್ಠರಿಗೆ ಮನವರಿಕೆ ಇದೆ. ಇದರ ಆಧಾರದಲ್ಲಿ ಅರ್ಹರಿಗೆ ಹಾಗೂ ಎಲ್ಲ ಜಿಲ್ಲೆಗಳಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ ಎಂದು ವಿವರಿಸಿದರು.